ಶೆಹಬಾಜ್ ಷರೀಫ್
(ಪಿಟಿಐ ಚಿತ್ರ)
ಕರಾಚಿ: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಇಂದು (ಗುರುವಾರ) ಬಲೂಚಿಸ್ತಾನ ಪ್ರಾಂತ್ಯಕ್ಕೆ ಭೇಟಿ ನೀಡಿದ್ದಾರೆ.
ಮಂಗಳವಾರ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ದಾಳಿ ನಡೆಸಿದ್ದ ಉಗ್ರರು ಒಟ್ಟು 21 ಮಂದಿ ಪ್ರಯಾಣಿಕರನ್ನು ಹಾಗೂ ಅರೆಸೇನಾ ಪಡೆಯ ನಾಲ್ಕು ಮಂದಿಯನ್ನು ಹತ್ಯೆ ಮಾಡಿದ್ದರು.
ಘಟನೆ ನಡೆದ ಒಂದು ದಿನದ ಬಳಿಕ ಬಲೂಚಿಸ್ತಾನ ಪ್ರಾಂತ್ಯಕ್ಕೆ ಭೇಟಿ ನೀಡಿದ ಪ್ರಧಾನಿ, ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಅವರೊಂದಿಗೆ ಉಪ ಪ್ರಧಾನಿ ಮುಹಮ್ಮದ್ ಇಶಾಕ್ ದಾರ್, ಸಚಿವರಾದ ಅತಾವುಲ್ಲಾ ತರಾರ್, ಅಹ್ಸಾನ್ ಇಕ್ಬಾಲ್ ಮತ್ತು ಇತರರು ಇದ್ದರು.
ಜಾಫರ್ ಎಕ್ಸ್‌ಪ್ರೆಸ್ ಹೆಸರಿನ ರೈಲು ಕ್ವೆಟ್ಟಾದಿಂದ ಪೆಶಾವರ ಕಡೆ ಮಂಗಳವಾರ ತೆರಳುತ್ತಿತ್ತು. ಆಗ ಸ್ಫೋಟಕ ಬಳಸಿ ರೈಲಿನ ಹಳಿ ತಪ್ಪಿಸಿದ್ದ ಉಗ್ರರು ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದರು. ರೈಲಿನ ಮೇಲೆ ದಾಳಿ ನಡೆಸಿದ್ದು ತಾನು ಎಂದು ಬಲೂಚಿಸ್ತಾನ ಮುಕ್ತಿ ಸೇನೆ (ಬಿಎಲ್‌ಎ) ಹೇಳಿಕೊಂಡಿತ್ತು.
ರೈಲು ಪ್ರಯಾಣಿಕರನ್ನು ರಕ್ಷಿಸುವ ಉದ್ದೇಶದಿಂದ ನಡೆಸಿದ ಸೇನಾ ಕಾರ್ಯಾಚರಣೆ ಪೂರ್ಣಗೊಂಡಿದೆ . ಸ್ಥಳದಲ್ಲಿ ಇದ್ದ 33 ಮಂದಿ ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ಪಾಕಿಸ್ತಾನ ಸೇನೆಯ ವಕ್ತಾರ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಅವರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದರು.
‘ರೈಲಿನಲ್ಲಿ ಒಟ್ಟು 440 ಮಂದಿ ಪ್ರಯಾಣಿಕರಿದ್ದರು. ರಕ್ಷಣಾ ಕಾರ್ಯಾಚರಣೆಯನ್ನು ಪಾಕಿಸ್ತಾನದ ಭದ್ರತಾ ಪಡೆಗಳು ಅಪಾರ ಕೌಶಲದೊಂದಿಗೆ ನಡೆಸಿವೆ’ ಎಂದು ಪಾಕಿಸ್ತಾನದ ಸಚಿವ ಅತಾವುಲ್ಲಾ ತರಾರ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.