ADVERTISEMENT

ಮುಂಬೈ ದಾಳಿ ಸಂಚುಕೋರ ಹಫೀಜ್ ಮನೆ ಬಳಿ ಸ್ಫೋಟ ಪ್ರಕರಣ:ಪ್ರಮುಖ ರೂವಾರಿ ಪತ್ತೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 13:05 IST
Last Updated 26 ಜೂನ್ 2021, 13:05 IST
ಹಫೀಜ್ ಸಯೀದ್
ಹಫೀಜ್ ಸಯೀದ್   

ಲಾಹೋರ್: ನಿಷೇಧಿತ ಜಮಾತ್ ಉದ್‌ ದಾವಾ (ಜೆಯುಡಿ) ಸಂಘಟನೆಯ ಮುಖ್ಯಸ್ಥ, 2008ರ ಮುಂಬೈನ ಉಗ್ರರ ದಾಳಿ ಪ್ರಕರಣದ ಸೂತ್ರಧಾರಿ ಹಫೀಜ್‌ ಸಯೀದ್‌ ನಿವಾಸದ ಬಳಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ರೂವಾರಿಯನ್ನು ಪಾಕ್‌ನ ಭದ್ರತಾ ಸಂಸ್ಥೆ ಪತ್ತೆ ಮಾಡಿದ್ದು, ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಪ್ರಮುಖ ಶಂಕಿತ ಆರೋಪಿ ಪೀಟರ್ ಪಾಲ್ ಡೇವಿಡ್ ನೀಡಿರುವ ಮಾಹಿತಿ ಆಧರಿಸಿ ಲಾಹೋರ್, ಶೇಖುಪುರ ಮತ್ತು ಪೇಶಾವರದಿಂದ ಇನ್ನೂ ಮೂವರು ಶಂಕಿತರನ್ನು ಬಂಧಿಸಲಾಗಿದೆ ಎಂದುಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬಂಧಿತ ಮೂವರು ಶಂಕಿತರು ಡೇವಿಡ್ ಜತೆಗೆ ಸಂಪರ್ಕದಲ್ಲಿದ್ದರು, ಅಲ್ಲದೇ ಅವರ ಕಾರನ್ನು ಡೇವಿಡ್‌ ಸ್ಫೋಟಕ್ಕೆ ಬಳಸಿದ್ದ. ತನಿಖಾಧಿಕಾರಿಗಳು ಸ್ಫೋಟದ ಸಂಚು ನಡೆಸಿದ ವ್ಯಕ್ತಿಯನ್ನು ಬಂಧಿಸುವ ಪ್ರಯತ್ನದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಸ್ಫೋಟದ ಸಂಚುಕೋರ ವ್ಯಕ್ತಿಯನ್ನು ಗುರುತಿಸಲಾಗಿದೆ. ಆತನ ಹೆಸರು ಸಮಿಯುಲ್ಲಾ. ಖೈಬರ್ ಪಖ್ತುಂಕ್ವಾ ಪ್ರಾಂತ್ಯಕ್ಕೆ ಸೇರಿದವನು. ಸದ್ಯ ದುಬೈನಲ್ಲಿ ವಾಸಿಸುತ್ತಿದ್ದಾನೆ. ಆತನ ಸಹೋದರ ಕಾರಿನಲ್ಲಿ ಸ್ಫೋಟಕಗಳನ್ನು ಇಟ್ಟಿದ್ದ. ಸಮಿಯುಲ್ಲಾ ಸಹೋದರನನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ’ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಪಂಜಾಬ್ ಕಾನೂನು ಸಚಿವ ಬಶರತ್ ರಾಜಾ ಅವರ ಪ್ರಕಾರ, ಬುಧವಾರ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಈವರೆಗೆ ಎಂಟು ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.