ADVERTISEMENT

ವಾಯುಪ್ರದೇಶ ನಿರ್ಬಂಧ ತೆರವಿಲ್ಲ: ಪಾಕ್‌

ಗಡಿಯಲ್ಲಿನ ಯುದ್ಧ ವಿಮಾನಗಳ ತೆರವಿಗೆ ಷರತ್ತು

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:45 IST
Last Updated 12 ಜುಲೈ 2019, 19:45 IST
   

ಇಸ್ಲಾಮಬಾದ್‌: ಗಡಿ ಭಾಗದ ವಾಯುನೆಲೆಯಲ್ಲಿ ನಿಯೋಜಿಸಿರುವ ಯುದ್ಧ ವಿಮಾನಗಳನ್ನು ಭಾರತ ವಾಪಸ್‌ ಕರೆಸಿಕೊಳ್ಳುವವರೆಗೂ, ವಾಣಿಜ್ಯ ವಿಮಾನಗಳಿಗೆ ಪಾಕಿಸ್ತಾನ ವಾಯುಪ್ರದೇಶಕ್ಕೆ ಅನುಮತಿ ನೀಡುವುದಿಲ್ಲ ಎಂದು ಪಾಕಿಸ್ತಾನದ ವಿಮಾನಯಾನ ಕಾರ್ಯದರ್ಶಿ ಶಾರುಖ್‌ ನುಸ್ರತ್‌ ಸಂಸದೀಯ ಸಮಿತಿಗೆ ತಿಳಿಸಿದ್ದಾರೆ.

ಪುಲ್ವಾಮಾ ದಾಳಿ ಬಳಿಕಫೆಬ್ರುವರಿ 26ರಂದು ಭಾರತೀಯ ವಾಯುಪಡೆ ವಿಮಾನಗಳು, ಬಾಲಕೋಟ್‌ ಪ್ರದೇಶದಲ್ಲಿ ಜೈಶ್‌ ಎ ಮೊಹಮ್ಮದ್‌(ಜೆಇಎಂ)ಭಯೋತ್ಪಾದಕರ ಸಂಘಟನೆ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿದ ನಂತರದಲ್ಲಿ ಪಾಕಿಸ್ತಾನ ತನ್ನ ವಾಯುಪ್ರದೇಶದಲ್ಲಿ ವಿಮಾನ ಹಾರಾಟಕ್ಕೆ ಸಂಪೂರ್ಣ ತಡೆಯೊಡ್ಡಿತ್ತು.

‘ವಾಯುಪ್ರದೇಶ ನಿರ್ಬಂಧ ತೆರವು ಮಾಡಲು ಭಾರತ ಸರ್ಕಾರ ಕೇಳಿಕೊಂಡಿತ್ತು. ಯುದ್ಧ ವಿಮಾನಗಳನ್ನು ವಾಪಸು ಕರೆಸಿಕೊಳ್ಳುವವರೆಗೂಭಾರತದ ವಾಣಿಜ್ಯ ವಿಮಾನಗಳ ಹಾರಾಟಕ್ಕೆ ಪಾಕಿಸ್ತಾನದ ವಾಯುಪ್ರದೇಶ ನಿರ್ಬಂಧಿಸುವುದಾಗಿ ನಾಗರಿಕ ವಿಮಾನಯಾನ ಪ್ರಾಧಿಕಾರ(ಸಿಎಎ)ಸೂಚಿಸಿದೆ’ ಎಂದು ನುಸ್ರತ್‌ ಮಾಹಿತಿ ನೀಡಿದ್ದಾರೆಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

ADVERTISEMENT

ಥಾಯ್ಲೆಂಡ್‌ ಹಾಗೂ ಮಲೇಷ್ಯಾದಿಂದ ಪಾಕಿಸ್ತಾನಕ್ಕೆ ಹಾರಾಟ ನಡೆಸುವ ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ವಿಮಾನಗಳ ಹಾರಾಟ ಸಂಪೂರ್ಣ ಸ್ತಬ್ಧವಾಗಿದೆ. ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಸಚಿವೆ ಸುಷ್ಮಾ ಸ್ವರಾಜ್‌ ಅವರು ಕಿರ್ಗಿಸ್ತಾನ್‌ಗೆ ಪ್ರವಾಸ ಹೊರಟಿದ್ದ ಸಂದರ್ಭದಲ್ಲಿ ಅವರ ವಿಮಾನ ಹಾರಾಟಕ್ಕೆ ವಿಶೇಷ ಒಪ್ಪಿಗೆಯನ್ನು ಪಾಕಿಸ್ತಾನ ನೀಡಿತ್ತು. ಆದರೆ ಇದನ್ನು ಭಾರತ ಬಳಸಿಕೊಂಡಿರಲಿಲ್ಲ.

₹430 ಕೋಟಿಗೂ ಅಧಿಕ ವೆಚ್ಚ
ಪಾಕಿಸ್ತಾನದ ವಾಯುಪ್ರದೇಶ ನಿರ್ಬಂಧದ ಬಳಿಕ ಭಾರತದಿಂದ ಹೊರಡುವ ಎಲ್ಲ ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ. ಇದರಿಂದಾಗಿ ವೈಮಾನಿಕ ಉದ್ಯಮ ನಷ್ಟ ಅನುಭವಿಸುತ್ತಿದೆ. ಏರ್‌ ಇಂಡಿಯಾ ಒಂದಕ್ಕೇ ಅಂದಾಜು ₹430 ಕೋಟಿ ಹೆಚ್ಚುವರಿ ಹೊರೆಯಾಗಿದೆ ಎಂದು ಗುರುವಾರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌ ಸಿಂಗ್‌ ಪುರಿ ಸಂಸತ್ತಿನಲ್ಲಿ ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.