ADVERTISEMENT

ಅಣ್ವಸ್ತ್ರಯುಕ್ತ ವಾತಾವರಣದಲ್ಲಿ ಯುದ್ಧಕ್ಕೆ ಅವಕಾಶವಿಲ್ಲ: ಪಾಕ್ ಸೇನಾ ಮುಖ್ಯಸ್ಥ

ಪಿಟಿಐ
Published 18 ಅಕ್ಟೋಬರ್ 2025, 10:48 IST
Last Updated 18 ಅಕ್ಟೋಬರ್ 2025, 10:48 IST
ಪಾಕ್ ಧ್ವಜ
ಪಾಕ್ ಧ್ವಜ   

ಇಸ್ಲಾಮಾಬಾದ್: ಯಾವುದೇ ಸಣ್ಣ ಪ್ರಚೋದನೆಗೂ ನಿರ್ಣಾಯಕ ಪ್ರತಿಕ್ರಿಯೆ ನೀಡುವುದಾಗಿ ಹೇಳುವ ಮೂಲಕ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಅಸಿಮ್ ಮುನೀರ್ ಹೇಳಿದ್ದಾರೆ. ಪರಮಾಣು ಜಗತ್ತಿನಲ್ಲಿ ಯುದ್ಧಕ್ಕೆ ಅವಕಾಶವಿಲ್ಲ ಎನ್ನುವ ಮೂಲಕ ಮತ್ತೊಮ್ಮೆ ಅಣು ಬಾಂಬ್ ಗುಮ್ಮವನ್ನು ಮುನ್ನಲೆಗೆ ತಂದಿದ್ದಾರೆ ಎಂದು ವರದಿ ತಿಳಿಸಿದೆ.

ಖೈಬರ್ ಪಖ್ತುಂಖ್ವಾದ ಅಬೋಟಾಬಾದ್‌ನಲ್ಲಿರುವ ಪಾಕಿಸ್ತಾನದ ಪ್ರಧಾನ ಮಿಲಿಟರಿ ಅಕಾಡೆಮಿ (ಪಿಎಂಎ) ಕಾಕುಲ್‌ನಲ್ಲಿ ನಡೆದ ಸೇನಾ ಕೆಡೆಟ್‌ಗಳ ಪದವಿ ಪ್ರದಾನ ಸಮಾರಂಭದಲ್ಲಿ ಮುನೀರ್ ಮಾತನಾಡುತ್ತಾ, ಪರಮಾಣುಯುಕ್ತ ವಾತಾವರಣದಲ್ಲಿ ಯುದ್ಧಕ್ಕೆ ಅವಕಾಶವಿಲ್ಲ ಎಂದು ನಾನು ಭಾರತದ ಮಿಲಿಟರಿ ನಾಯಕತ್ವಕ್ಕೆ ಸಲಹೆ ನೀಡುತ್ತೇನೆ ಮತ್ತು ದೃಢವಾಗಿ ಎಚ್ಚರಿಸುತ್ತೇನೆ ಎಂದಿದ್ದಾರೆ.

ನಾವು ಎಂದಿಗೂ ಬೆದರುವುದಿಲ್ಲ, ಪ್ರಚೋದಿಸುವುದಿಲ್ಲ, ಸಣ್ಣ ಪ್ರಚೋದನೆಗೆ ಸಹ ಯಾವುದೇ ಹಿಂಜರಿಕೆಯಿಲ್ಲದೆ ನಿರ್ಣಾಯಕವಾಗಿ ಪ್ರತಿಕ್ರಿಯಿಸುತ್ತೇವೆ ಎಂದಿದ್ದಾರೆ.

ADVERTISEMENT

ಭಾರತ ಮತ್ತು ಪಾಕಿಸ್ತಾನ ನಡುವಿನ ಇತ್ತೀಚಿನ ಮಿಲಿಟರಿ ಸಂಘರ್ಷವನ್ನು ಉಲ್ಲೇಖಿಸಿ ಮಾತನಾಡಿರುವ ಮುನೀರ್, ‘ದೇಶದ ಸಶಸ್ತ್ರ ಪಡೆಗಳು ಎಲ್ಲ ಬೆದರಿಕೆಗಳನ್ನು ತಟಸ್ಥಗೊಳಿಸುವ ಮೂಲಕ ಗಮನಾರ್ಹ ವೃತ್ತಿಪರತೆ ಮತ್ತು ದೂರಗಾಮಿ ಸಾಮರ್ಥ್ಯಗಳನ್ನು ಪ್ರದರ್ಶಿಸಿವೆ’ ಎಂದಿದ್ದಾರೆ.

ಏಪ್ರಿಲ್ 22ರಂದು 26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆ ಆರಂಭಿಸಿತ್ತು.

ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸುವ ಜೊತೆಗೆ ಹಲವು ಉಗ್ರರನ್ನೂ ಕೊಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.