ADVERTISEMENT

ಭಾರತದ ಕಂಪನಿಯಿಂದ ಕಿಕ್‌ ಬ್ಯಾಕ್ ಪಡೆದಿದ್ದ ಪಾಕ್‌ ಮಾಜಿ ಪ್ರಧಾನಿ: ಶಹಬಾಜ್‌ ಗಿಲ್

ಪಿಟಿಐ
Published 1 ಆಗಸ್ಟ್ 2022, 10:47 IST
Last Updated 1 ಆಗಸ್ಟ್ 2022, 10:47 IST
ಶಾಹಿದ್‌ ಖಾಕನ್‌ ಅಬ್ಬಾಸಿ 
ಶಾಹಿದ್‌ ಖಾಕನ್‌ ಅಬ್ಬಾಸಿ    

ಲಾಹೋರ್‌: ‘ಪಾಕಿಸ್ತಾನದ ಮಾಜಿ‍ಪ್ರಧಾನಿ ಶಾಹಿದ್‌ ಖಾಕನ್‌ ಅಬ್ಬಾಸಿ ಅವರು ಭಾರತದ ಕಂಪನಿಯೊಂದರಿಂದ ‘ಕಿಕ್‌ ಬ್ಯಾಕ್‌’ ಪಡೆದಿದ್ದರು’ ಎಂದು ಪಾಕಿಸ್ತಾನ್‌ ತೆಹ್ರೀಕ್‌ ಎ ಇನ್ಸಾಫ್‌ (ಪಿಟಿಐ) ಪಕ್ಷದ ಮುಖಂಡ ಶಹಬಾಜ್‌ ಗಿಲ್‌ ಆರೋಪಿಸಿದ್ದಾರೆ.

‘ಶಾಹಿದ್‌ ಅವರು ನವಾಜ್‌ ಷರೀಫ್‌ ಸಂ‍ಪುಟದಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದರು. ಆಗ ಭಾರತದ ಕಂಪನಿಯೊಂದರಿಂದ ₹4.63 ಕೋಟಿ ಲಂಚ ಪಡೆದಿದ್ದರು ಎಂದು ಗಿಲ್‌ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ’ ಎಂದು ಡಾನ್‌ ಪತ್ರಿಕೆ ವರದಿ ಮಾಡಿದೆ.

‘ಒಟ್ಟು ಮೂರು ಹಂತಗಳಲ್ಲಿ (‌2016ರ ಡಿಸೆಂಬರ್‌ ಹಾಗೂ 2017ರ ಜನವರಿ) ಅಬ್ಬಾಸಿ ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದ ರಶೀದಿಗಳುತಮ್ಮ ಬಳಿ ಇವೆ ಎಂದೂ ಗಿಲ್‌ ಹೇಳಿದ್ದಾರೆ. ಆದರೆ ಕಂಪನಿಯ ಹೆಸರನ್ನು ಅವರು ಬಹಿರಂಗಪಡಿಸಿಲ್ಲ’ ಎಂದೂ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ.

ADVERTISEMENT

‘ಗಿಲ್‌ ಅವರು ನನ್ನ ಮೇಲೆ ಸುಮ್ಮನೆ ಆರೋಪ ಮಾಡುವ ಬದಲು ಸೂಕ್ತ ದಾಖಲೆಗಳ ಸಹಿತ ದೂರು ನೀಡಲಿ’ ಎಂದು ಪಾಕಿಸ್ತಾನ ಮುಸ್ಲಿಂ ಲೀಗ್‌–ನವಾಜ್‌ (ಪಿಎಂಎಲ್‌–ಎನ್‌) ಪಕ್ಷದ ಹಿರಿಯ ಉಪಾಧ್ಯಕ್ಷರೂ ಆಗಿರುವ ಅಬ್ಬಾಸಿ ಹೇಳಿದ್ದಾರೆ.

ಅಬ್ಬಾಸಿ ಅವರು 2017 ಆಗಸ್ಟ್‌ನಿಂದ 2018 ಮೇ ವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.