ADVERTISEMENT

ಪಾಕ್‌ಗೆ ಅಮೆರಿಕ ಎಫ್‌ 16 ಯುದ್ಧ ವಿಮಾನ: ಜೈಶಂಕರ್‌ ಹೇಳಿಕೆ ತಿರಸ್ಕರಿಸಿದ ಪಾಕ್‌

ಪಿಟಿಐ
Published 27 ಸೆಪ್ಟೆಂಬರ್ 2022, 14:18 IST
Last Updated 27 ಸೆಪ್ಟೆಂಬರ್ 2022, 14:18 IST
   

ಇಸ್ಲಾಮಾಬಾದ್‌: ‘ಅಮೆರಿಕದ ಜತೆಗಿನ ನಮ್ಮ ಸಂಬಂಧದ ಬಗ್ಗೆ ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಮಾಡಿರುವ ಟೀಕೆ ಅನಗತ್ಯವಾದುದು. ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗಾಗಿ ಉಭಯ ದೇಶಗಳ ನಡುವಿನ ಸಂಬಂಧಗಳು ಅತ್ಯಗತ್ಯ’ ಎಂದು ಪಾಕಿಸ್ತಾನ ಮಂಗಳವಾರ ಹೇಳಿದೆ.

ವಾಷಿಂಗ್ಟನ್‌ನಲ್ಲಿ ಸಚಿವ ಎಸ್‌. ಜೈಶಂಕರ್‌ ಅವರು, ಪಾಕ್‌ಗೆ ಅಮೆರಿಕ ಎಫ್‌ 16 ಯುದ್ಧ ವಿಮಾನಗಳನ್ನುನೀಡುತ್ತಿರುವ ಬಗ್ಗೆ ಮಾಡಿರುವ ಟೀಕೆಗೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಕಚೇರಿ ಈ ಪ್ರತಿಕ್ರಿಯೆ ನೀಡಿದೆ.

ವಾಷಿಂಗ್ಟನ್‌: ‘ಭಯೋತ್ಪಾದನೆಯ ನಿಗ್ರಹದ ಕಾರಣ ನೀಡಿ, ನೀವು ಪಾಕಿಸ್ತಾನಕ್ಕೆ ಎಫ್‌ 16 ಯುದ್ಧ ವಿಮಾನಗಳನ್ನು ಕೊಡುತ್ತಿದ್ದೀರಿ. ಈ ಮೂಲಕ ನೀವು ಯಾರನ್ನು ಮೂರ್ಖರನ್ನಾಗಿಸಲು ಹೊರಟಿದ್ದೀರಿ’ ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರು ಅಮೆರಿಕ‌ದ ಇಬ್ಬಗೆಯ ನೀತಿ ವಿರುದ್ಧ ಚಾಟಿ ಬೀಸಿದ್ದಾರೆ.

ADVERTISEMENT

ವಾಷಿಂಗ್ಟನ್‌ನಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಅವರು ಭಾರತೀಯ ಅಮೆರಿಕನ್ನರೊಂದಿಗೆ ಸೋಮವಾರ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಎಫ್ -16ರಂತಹ ಯುದ್ಧ ವಿಮಾನಗಳ ಸಾಮರ್ಥ್ಯ ಎಲ್ಲರಿಗೂ ತಿಳಿದಿದೆ. ಭಯೋತ್ಪಾದನೆ ನಿಗ್ರಹಕ್ಕಾಗಿ ಇವುಗಳನ್ನು ಒದಗಿಸುತ್ತಿರುವುದಾಗಿ ನೀವು (ಅಮೆರಿಕ) ಹೇಳಬಹುದು. ಆದರೆ, ಅವುಗಳನ್ನು ಅವರು ಎಲ್ಲಿ ನಿಯೋಜಿಸಿದ್ದಾರೆ ಮತ್ತು ಯಾವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ನಿಮಗೆ ತಿಳಿದಿದೆಯಾ? ಇಂತಹ ವಿಷಯಗಳನ್ನು ಹೇಳಿ ನೀವು ಯಾರನ್ನೂ ಮೂರ್ಖರನ್ನಾಗಿಸಲಾಗದು’ ಎಂದು ಜೈಶಂಕರ್‌ ಪ್ರಶ್ನಿಸಿದ್ದರು.

ಪಾಕಿಸ್ತಾನಕ್ಕೆ ನೀಡುತ್ತಿರುವ ಸೇನಾ ನೆರವಿನ ಸಮರ್ಥನೆ ಮತ್ತು ಆ ರಾಷ್ಟ್ರದೊಂದಿಗಿನ ಬಾಂಧವ್ಯಗಳು ಅಮೆರಿಕದ ಹಿತಾಸಕ್ತಿಗಳನ್ನು ಎಂದಿಗೂ ರಕ್ಷಿಸಿಲ್ಲ ಎಂದು ಅವರು ಹೇಳಿದರು.

ಅಮೆರಿಕ ಮಾಧ್ಯಮಗಳಿಗೂ ತಪರಾಕಿ:

‘ಅಮೆರಿಕದ ಮಾಧ್ಯಮಗಳು ಭಾರತದ ಬಗ್ಗೆ ಪಕ್ಷಪಾತದಿಂದ ಕೂಡಿದ ವರದಿಗಳನ್ನು ಪ್ರಕಟಿಸುತ್ತಿವೆ’ ಎಂದು ಸಚಿವ ಎಸ್‌. ಜೈಶಂಕರ್ ಟೀಕಿಸಿದ್ದರು.

ಹೆಸರು ಉಲ್ಲೇಖಿಸದೇ ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆ ಬಗ್ಗೆಯೂ ಅವರು ಪರೋಕ್ಷ ಆಕ್ಷೇಪ ವ್ಯಕ್ತಪಡಿಸಿ, ‘ಇಲ್ಲಿನ ಮಾಧ್ಯಮಗಳನ್ನು ಗಮನಿಸಿದೆ. ಈ ನಗರದಿಂದ ಪ್ರಕಟವಾಗುವ ಪತ್ರಿಕೆಯೊಂದು ಸೇರಿ ಇಲ್ಲಿನ ಮಾಧ್ಯಮಗಳು ಏನು ಪ್ರಕಟಿಸುತ್ತಿವೆ ಎಂಬುದು ನಿಮಗೆ ನಿಜವಾಗಿಯೂ ಗೊತ್ತಿದೆಯೇ’ ಎಂದು ಭಾರತೀಯ–ಅಮೆರಿಕನ್ನರನ್ನು ಪ್ರಶ್ನಿಸಿದರು.

ಜೆಫ್ ಬೆಜೋಸ್ ಮಾಲೀಕತ್ವದ ‘ದಿ ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯು ವಾಷಿಂಗ್ಟನ್‌ನಿಂದ ಪ್ರಕಟವಾಗುತ್ತಿದೆ.

ಭಾರತ ವಿರೋಧಿ ಶಕ್ತಿಗಳು ಇಲ್ಲಿ ಹೆಚ್ಚುತ್ತಿವೆಯಲ್ಲ ಎಂದು ಕೇಳಿದ ಪ್ರಶ್ನೆಗೆ, ‘ಇಲ್ಲಿನ ಮಾಧ್ಯಮಗಳ ವರದಿಗಳು ಪಕ್ಷಪಾತದಿಂದ ಕೂಡಿವೆ. ಭಾರತದಲ್ಲಿ ನಿಜವಾಗಿಯೂ ಪ್ರಯತ್ನಗಳಾಗುತ್ತಿವೆ. ಭಾರತವು ತನ್ನ ಹಾದಿಯಲ್ಲೇ ಸಾಗುತ್ತಿದೆ. ಆದರೆ, ತಾವೇ ಭಾರತದ ರಕ್ಷಕರು ಮತ್ತು ಭಾರತ ರೂಪಿಸುವವರು ಎಂದು ಭಾವಿಸಿರುವವರು ಅಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಹೀಗೆ ಹೇಳುವವರ ಬಣ್ಣವೂ ಬಯಲಾಗುತ್ತಿದೆ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.