ADVERTISEMENT

ಕೊರೊನಾ ಮಧ್ಯೆ ಸದ್ದಿಲ್ಲದೆ ಪಾಕ್ ಉಗ್ರರ ಪಟ್ಟಿಯಿಂದ ಸಾವಿರಾರು ಹೆಸರು ಡಿಲೀಟ್

ಪಿಟಿಐ
Published 21 ಏಪ್ರಿಲ್ 2020, 10:35 IST
Last Updated 21 ಏಪ್ರಿಲ್ 2020, 10:35 IST
ಝಾಕಿಯುರ್ ರೆಹಮಾನ್ ಲಖ್ವಿ
ಝಾಕಿಯುರ್ ರೆಹಮಾನ್ ಲಖ್ವಿ   

ನ್ಯೂಯಾರ್ಕ್‌: ಮುಂಬೈನಲ್ಲಿ 2008ರಲ್ಲಿ ನಡೆದಿದ್ದ ದಾಳಿಯ ಪ್ರಮುಖ ಸಂಚುಕೋರ, ಎಲ್‌ಇಟಿ ಉಗ್ರ ಸಂಘಟನೆಯ ಕಮಾಂಡರ್ ಝಾಕಿಯುರ್ ರೆಹಮಾನ್ ಲಖ್ವಿ ಸೇರಿದಂತೆ 1,800 ಉಗ್ರರನ್ನು ಪಾಕಿಸ್ತಾನವು ಭಯೋತ್ಪಾದಕರ ನಿಗಾ ಪಟ್ಟಿಯಿಂದ ತೆರವುಗೊಳಿಸಿದೆ ಎಂದು ಅಮೆರಿದಕ ತಂತ್ರಜ್ಞಾನ ಸಂಸ್ಥೆಯೊಂದು ಹೇಳಿದೆ.

ಈ ಪಟ್ಟಿಯನ್ನು ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪ್ರಾಧಿಕಾರವು ನಿರ್ವಹಿಸುತ್ತಿದೆ. ಹಣಕಾಸು ಸಂಸ್ಥೆಗಳು ಶಂಕಿತ ಉಗ್ರರೊಂದಿಗೆ ಹಣಕಾಸು ಚಟುವಟಿಕೆ ನಡೆಸದಿರಲಿ ಎಂಬ ಉದ್ದೇಶದಿಂದ ಈ ಪಟ್ಟಿಯನ್ನು ನಿರ್ವಹಿಸಲಾಗುತ್ತಿದೆ.

2018ರಲ್ಲಿ ಈ ಪಟ್ಟಿ ಸುಮಾರು 7,600 ಹೆಸರುಗಳನ್ನು ಒಳಗೊಂಡಿತ್ತು. ಈ ಸಂಖ್ಯೆ ಕಳೆದ 18 ತಿಂಗಳುಗಳಲ್ಲಿ 3,800ಕ್ಕೆ ಇಳಿಕೆಯಾಗಿದೆ. ಮಾರ್ಚ್‌ನಿಂದ ಈವರೆಗೆ ಸುಮಾರು 1,800 ಹೆಸರುಗಳನ್ನು ಪಟ್ಟಿಯಿಂದ ತೆರವುಗೊಳಿಸಲಾಗಿದೆ ಎಂದು ನ್ಯೂಯಾರ್ಕ್ ಮೂಲದ ತಂತ್ರಜ್ಞಾನ ಕಂಪನಿ ಕ್ಯಾಸ್ಟೆಲಮ್ ಎ.ಐ ತಿಳಿಸಿದೆ.

ADVERTISEMENT

ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಮಟ್ಟದ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌) ವಿಧಿಸಿದ್ದ ಷರತ್ತುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಸದ್ಯ ಕಾರ್ಯನಿರ್ವಹಿಸುತ್ತಿದೆ. ಆದಾಗ್ಯೂ, ಭಯೋತ್ಪಾದಕರಿಗೆ ಹಣಕಾಸು ನೆರವು ಸಿಗದಂತೆ ಮಾಡುವ ನಿಟ್ಟಿನಲ್ಲಿ ಎಫ್‌ಎಟಿಎಫ್‌ ಶಿಫಾರಸುಗಳನ್ನು ಅನುಷ್ಠಾನಗೊಳಿಸುವಲ್ಲಿ ಪಾಕಿಸ್ತಾನ ದಕ್ಷತೆ ತೋರುತ್ತಿಲ್ಲ ಎನ್ನಲಾಗಿದೆ. ‘ಈವರೆಗೆ ಪಾಕಿಸ್ತಾನವು ಅದಕ್ಕೆ ಸೂಚಿಸಲಾಗಿದ್ದ 27 ಕ್ರಮಗಳ ಪೈಕಿ 14ರನ್ನು ಮಾತ್ರ ಪೂರ್ಣಗೊಳಿಸಿದೆ. ಬಾಕಿ ಕ್ರಮಗಳು ವಿವಿಧ ಹಂತಗಳಲ್ಲಿವೆ’ ಎಂದು ಫೆಬ್ರುವರಿಯಲ್ಲಿ ಎಫ್‌ಎಟಿಎಫ್‌ ತಿಳಿಸಿತ್ತು.

ಭಯೋತ್ಪಾದಕರ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಎಫ್‌ಎಟಿಎಫ್‌ 2020ರ ಜೂನ್‌ನಲ್ಲಿ ಮತ್ತೆ ಮೌಲ್ಯಮಾಪನ ನಡೆಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.