ADVERTISEMENT

‘ಸೇನಾ ರಾಕೆಟ್‌ ಪಡೆ’ ರಚನೆ: ಪಾಕಿಸ್ತಾನ ಘೋಷಣೆ

ಪಿಟಿಐ
Published 14 ಆಗಸ್ಟ್ 2025, 14:26 IST
Last Updated 14 ಆಗಸ್ಟ್ 2025, 14:26 IST
ಶೆಹಬಾಜ್‌ ಶರೀಫ್‌
ಶೆಹಬಾಜ್‌ ಶರೀಫ್‌   

ಇಸ್ಲಾಮಾಬಾದ್‌: ಪಾಕಿಸ್ತಾನವು ಹೊಸದಾಗಿ ‘ಸೇನಾ ರಾಕೆಟ್‌ ಪಡೆ’ಯನ್ನು ರಚಿಸಲಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಶರೀಫ್‌ ಘೋಷಿಸಿದ್ದಾರೆ.

ಅತ್ಯಾಧುನಿಕ ತಂತ್ರಜ್ಞಾನದ ಯುದ್ಧಾಸ್ತ್ರಗಳನ್ನು ಬಳಸುವ ನೈಪುಣ್ಯವನ್ನು ಈ ಪಡೆ ಹೊಂದಿರುತ್ತದೆ. ದೇಶದ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಈ ಪಡೆ ಒಂದು ಮೈಲುಗಲ್ಲಾಗಲಿದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಿಂದಿನ ದಿನವಾದ ಬುಧವಾರ ರಾತ್ರಿ ಅವರು ಈ ವಿಷಯ ಪ್ರಕಟಿಸಿದ್ದಾರೆ. ಈ ಪಡೆಯ ಕಾರ್ಯನಿರ್ವಹಣೆ ಮತ್ತು ಜವಾಬ್ದಾರಿಗಳ ಕುರಿತು ಅವರು ಹೆಚ್ಚಿನ ಮಾಹಿತಿಯನ್ನು ನೀಡಲಿಲ್ಲ.

ADVERTISEMENT

ಪಾಕಿಸ್ತಾನದ ಈ ಹೊಸ ಪಡೆಯ ರಚನೆಯು ಚೀನಾದಲ್ಲಿನ ‘ಪೀಪಲ್‌ ಲಿಬರೇಷನ್‌ ಆರ್ಮಿ’ಯ ರಾಕೆಟ್‌ ಪಡೆಯಿಂದ ಸ್ಫೂರ್ತಿ ಪಡೆದಿದೆ ಎನ್ನಲಾಗಿದೆ. ಚೀನಾದ ಈ ಪಡೆಯು ಭೂ ಆಧಾರಿತ ಖಂಡಾಂತರ ಕ್ಷಿಪಣಿಗಳು, ಹೈಪರ್‌ಸಾನಿಕ್‌, ಕ್ರೂಸ್‌ ಕ್ಷಿಪಣಿಗಳು ಸೇರಿದಂತೆ ಪರಮಾಣು ಮತ್ತು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಶಸ್ತ್ರಾಗಾರದ ನಿಯಂತ್ರಣ ಹೊಂದಿದೆ.  

ಪ್ರಧಾನಿ ಶೆಹಬಾಜ್‌ ಅವರು ಈ ಕುರಿತು ಘೋಷಣೆ ಮಾಡಿದ ಕಾರ್ಯಕ್ರಮದಲ್ಲಿ, ಪಾಕಿಸ್ತಾನದ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ, ಮೂರೂ ಪಡೆಗಳ ಮುಖ್ಯಸ್ಥರು, ರಾಷ್ಟ್ರೀಯ ಮತ್ತು ವಿದೇಶಿ ಪ್ರತಿನಿಧಿಗಳು ಹಾಜರಿದ್ದರು. 

ಇದೇ ವೇಳೆ ಅವರು, ಭಾರತ ಮತ್ತು ಪಾಕ್‌ ನಡುವೆ ಇತ್ತೀಚೆಗೆ ನಡೆದ ನಾಲ್ಕು ದಿನಗಳ ಸೇನಾ ಸಂಘರ್ಷವನ್ನೂ  ಪ್ರಸ್ತಾಪಿಸಿದರು. ಈ ಸಂಘರ್ಷದಲ್ಲಿ ಪಾಕಿಸ್ತಾನಕ್ಕೆ ಬಹುದೊಡ್ಡ ಜಯ ದೊರೆತಿದೆ ಎಂದ ಅವರು, ‘ಇದರ ಶ್ರೇಯ ದೇಶದ ಪರಮಾಣು ಕಾರ್ಯತಂತ್ರ ಸಾಮರ್ಥ್ಯಕ್ಕೆ ಸಲ್ಲುತ್ತದೆ’ ಎಂದಿದ್ದಾರೆ. 

‘ಇದರ ಪರಿಣಾಮ ಭಾರತದ ಆರ್ಭಟ ನಾಲ್ಕೇ ದಿನಕ್ಕೆ ಛಿದ್ರಗೊಂಡಿತು’ ಎಂದು ಹೇಳಿದ್ದಾರೆ.

ಎರಡೂ ದೇಶಗಳ ನಡುವಿನ ಸಂಘರ್ಷವನ್ನು ಶಮನಗೊಳಿಸಿ, ಕದನ ವಿರಾಮ ಘೋಷಣೆಯಾಗಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಹಿಸಿದ ಪಾತ್ರ ಮಹತ್ವದ್ದಾಗಿತ್ತು ಎಂದ ಅವರು, ‘ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಯ ನಿರ್ಣಯದಂತೆ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.