ADVERTISEMENT

ಅಮೆರಿಕ ಪತ್ರಕರ್ತ ಪರ್ಲ್‌ ಹತ್ಯೆ ಅಪರಾಧಿ ಬಿಡುಗಡೆಗೆ ಪಾಕಿಸ್ತಾನ ‘ಸುಪ್ರೀಂ’ ಆದೇಶ

ಪಿಟಿಐ
Published 28 ಜನವರಿ 2021, 12:26 IST
Last Updated 28 ಜನವರಿ 2021, 12:26 IST
ಡೇನಿಯಲ್‌ ಪರ್ಲ್‌
ಡೇನಿಯಲ್‌ ಪರ್ಲ್‌   

ಇಸ್ಲಾಮಾಬಾದ್‌: ಅಮೆರಿಕದ ಪತ್ರಕರ್ತ ಡೇನಿಯಲ್‌ ಪರ್ಲ್‌ ಅವರನ್ನು 2002ರಲ್ಲಿ ಅಪಹರಿಸಿ, ಹತ್ಯೆಗೈದ ಪ್ರಕರಣದಲ್ಲಿ ಬ್ರಿಟನ್‌ ಮೂಲದ ಅಲ್‌ಕೈದಾ ಉಗ್ರ ಅಹ್ಮದ್‌ ಓಮರ್‌ ಸಯೀದ್‌ ಶೇಖ್‌ ಖುಲಾಸೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ತಿರಸ್ಕರಿಸಿದ ಪಾಕಿಸ್ತಾನ ಸುಪ್ರೀಂ ಕೋರ್ಟ್‌, ಸಯೀದ್‌ ಶೇಖ್‌ ಬಿಡುಗಡೆಗೆ ಗುರುವಾರ ಆದೇಶಿಸಿದೆ.

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಅಲ್‌ಕೈದಾ ನಡುವಿನ ಸಂಬಂಧದ ಕುರಿತು ತನಿಖಾ ವರದಿ ತಯಾರಿಸಲು ಪಾಕಿಸ್ತಾನಕ್ಕೆ ಆಗಮಿಸಿದ್ದ ‘ದಿ ವಾಲ್‌ ಸ್ಟ್ರೀಟ್‌ ಜರ್ನಲ್‌’ನ ದಕ್ಷಿಣ ಏಷ್ಯಾ ಬ್ಯುರೊದ ಮುಖ್ಯಸ್ಥರಾಗಿದ್ದ ಡೇನಿಯಲ್‌ ಅವರನ್ನು ಅಪಹರಿಸಿ, ತಲೆಕಡಿದು ಹತ್ಯೆ ಮಾಡಲಾಗಿತ್ತು. ಸಯೀದ್‌ ಶೇಖ್‌ ಸೇರಿದಂತೆ ಮೂವರು ಪ್ರಕರಣದಲ್ಲಿ ಅಪರಾಧಿಗಳು ಎಂದು ತೀರ್ಪು ನೀಡಿದ್ದ ನ್ಯಾಯಾಲಯವು ಅವರಿಗೆ ಜೈಲು ಶಿಕ್ಷೆ ವಿಧಿಸಿತ್ತು.

150 ಪ್ರಯಾಣಿಕರಿದ್ದ ಇಂಡಿಯನ್‌ ಏರ್‌ಲೈನ್ಸ್‌ ಫ್ಲೈಟ್‌ 814 ಅಪಹರಣದ ಸಂದರ್ಭದಲ್ಲಿ, ಜೈಷ್‌ –ಇ–ಮೊಹಮ್ಮದ್‌ ಮುಖ್ಯಸ್ಥ ಮಸೂದ್‌ ಅಜರ್‌, ಸಯೀದ್‌ ಶೇಖ್‌ ಹಾಗೂ ಮುಷ್ತಾಕ್‌ ಅಹ್ಮದ್‌ ಜರ್ಗಾರ್‌ ಅವರನ್ನು ಭಾರತವು ಬಿಡುಗಡೆಗೊಳಿಸಿತ್ತು. ಇದಾದ ಮೂರು ವರ್ಷಗಳಲ್ಲೇ ಡೇನಿಯಲ್‌ ಹತ್ಯೆ ನಡೆದಿತ್ತು. ವಿದೇಶದ ಪ್ರವಾಸಿಗರನ್ನು ಅಪಹರಿಸಿದ ಪ್ರಕರಣದಲ್ಲಿ ಸಯೀದ್‌ ಶೇಖ್‌ ಭಾರತದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ.

ADVERTISEMENT

ಅಪರಾಧಿಯನ್ನು ಖುಲಾಸೆಗೊಳಿಸಿದ ಸಿಂಧ್‌ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಿಂಧ್‌ ಸರ್ಕಾರ ಹಾಗೂ ಪರ್ಲ್‌ ಕುಟುಂಬವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ನ್ಯಾಯಮೂರ್ತಿ ಮುಷೀರ್‌ ಆಲಂ ಅವರಿದ್ದ ತ್ರಿಸದಸ್ಯ ಪೀಠವು ಹೈಕೋರ್ಟ್‌ ಆದೇಶವನ್ನು ಎತ್ತಿಹಿಡಿದು, ಸಿಂಧ್‌ ಸರ್ಕಾರದ ಅರ್ಜಿ ತಿರಸ್ಕರಿಸಿತು. ಶಂಕಿತನ ಬಿಡುಗಡೆಗೆ ಇದೇ ವೇಳೆ ಪೀಠವು ಆದೇಶಿಸಿತು. ಪೀಠದ ಸದಸ್ಯರ ಪೈಕಿ ಒಬ್ಬರು ಈ ನಿರ್ಧಾರವನ್ನು ವಿರೋಧಿಸಿದರು.

ಕಳೆದ ವರ್ಷ ಏಪ್ರಿಲ್‌ನಲ್ಲಿ ಸಿಂಧ್‌ ಹೈಕೋರ್ಟ್‌ನ ದ್ವಿಸದಸ್ಯ ಪೀಠವು, ಶೇಖ್‌ಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ಬದಲಾಯಿಸಿ 7 ವರ್ಷಗಳ ಜೈಲು ಶಿಕ್ಷೆಗೆ ಆದೇಶಿಸಿತ್ತು. ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಶೇಖ್‌ ಸಹಚರರಾದ ಫಹಾದ್‌ ನಸೀಮ್‌, ಶೇಖ್‌ ಆದಿಲ್‌ ಹಾಗೂ ಸಲ್ಮಾನ್‌ ಸಕೀಬ್‌ ಅವರನ್ನು ಹೈಕೋರ್ಟ್‌ ಖುಲಾಸೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.