ADVERTISEMENT

ಸಾಲದ ಸುಳಿಯಲ್ಲಿ ಪಾಕಿಸ್ತಾನ: ವಿದೇಶಿ ಸಾಲದ ಮೊತ್ತ ₹6.5 ಲಕ್ಷ ಕೋಟಿ

ಪ್ರಸಕ್ತ ವರ್ಷ ಮರುಪಾವತಿಸಬೇಕಿರುವ ವಿದೇಶಿ ಸಾಲದ ಮೊತ್ತ ₹6.5 ಲಕ್ಷ ಕೋಟಿ

ಪಿಟಿಐ
Published 18 ಜುಲೈ 2025, 13:39 IST
Last Updated 18 ಜುಲೈ 2025, 13:39 IST
.
.   

ಇಸ್ಲಾಮಾಬಾದ್‌: ಜುಲೈ 1ರಿಂದ ಆರಂಭವಾಗಿರುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಪಾಕಿಸ್ತಾನವು ₹6.5 ಲಕ್ಷ ಕೋಟಿ (23 ಬಿಲಿಯನ್‌ ಡಾಲರ್) ವಿದೇಶಿ ಸಾಲವನ್ನು ಮರುಪಾವತಿಸಬೇಕಿದ್ದು, ಸಾಲದ ಸುಳಿಯಲ್ಲಿ ಸಿಲುಕಿದೆ.

ಆರ್ಥಿಕ ಸಮೀಕ್ಷೆ 2024–25ರ ಪ್ರಕಾರ ಮಾರ್ಚ್‌ ಅಂತ್ಯದ ವೇಳೆಗೆ ಪಾಕಿಸ್ತಾನದ ಸಾಲದ ಒಟ್ಟು ಮೊತ್ತ ₹76 ಲಕ್ಷ ಕೋಟಿ. ಇದರಲ್ಲಿ ದೇಶೀಯ ಸಾಲ ₹51.52 ಲಕ್ಷ ಕೋಟಿ. ವಿದೇಶಿ ಸಾಲ ₹24.49 ಲಕ್ಷ ಕೋಟಿ ಎಂದು ಮಾಧ್ಯಮ ವರದಿ ತಿಳಿಸಿದೆ.

₹24.81 ಲಕ್ಷ ಕೋಟಿ ಸಾಲವನ್ನು ಅಂತರರಾಷ್ಟ್ರೀಯ ಹಣಕಾಸು ನಿಧಿ ಹಾಗೂ ವಿದೇಶಗಳಿಂದ ಪಡೆದಿದೆ.

ADVERTISEMENT

2025–26ನೇ ಸಾಲಿನಲ್ಲಿ ಪಡೆದಿರುವ ₹6.5 ಲಕ್ಷ ಕೋಟಿ ಮೊತ್ತದ ವಿದೇಶಿ ಸಾಲದಲ್ಲಿ ತನ್ನ ಮಿತ್ರ ರಾಷ್ಟ್ರಗಳಿಂದಲೇ ₹3.4 ಲಕ್ಷ ಕೋಟಿಯನ್ನು ಪಡೆದಿದೆ.

ಸೌದಿ ಅರೇಬಿಯಾದಿಂದ ₹1.40 ಲಕ್ಷ ಕೋಟಿ (5 ಬಿಲಿಯನ್‌ ಡಾಲರ್), ಚೀನಾದಿಂದ ₹1.13 ಕೋಟಿ (4 ಬಿಲಿಯನ್‌ ಡಾಲರ್‌), ಅರಬ್‌ ಸಂಯುಕ್ತ ಸಂಸ್ಥಾನದಿಂದ (ಯುಎಇ) ₹56 ಸಾವಿರ ಕೋಟಿ (2 ಬಿಲಿಯನ್‌ ಡಾಲರ್‌) ಹಾಗೂ ಕತಾರ್‌ನಿಂದ ₹28 ಸಾವಿರ ಕೋಟಿ (1 ಬಿಲಿಯನ್‌ ಡಾಲರ್‌) ಸಾಲ ಪಡೆದಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಸಾಲಗಾರರು, ಅಂತರರಾಷ್ಟ್ರೀಯ ಬಾಂಡ್‌ಹೋಲ್ಡರ್ಸ್‌ ಹಾಗೂ ವಾಣಿಜ್ಯ ಸಾಲದಾತರಿಗೆ ವಿದೇಶಿ ಸಾಲದಡಿ ಪಾಕಿಸ್ತಾನವು ಇನ್ನೂ ₹3.23 ಲಕ್ಷ ಕೋಟಿ (11 ಬಿಲಿಯನ್‌ ಡಾಲರ್‌) ಮರುಪಾವತಿಸಬೇಕಿದೆ.

2025–26ನೇ ಸಾಲಿನ ಬಜೆಟ್‌ ಮೊತ್ತ ₹17.57 ಲಕ್ಷ ಕೋಟಿ. ಇದರಲ್ಲಿ ₹8.2 ಲಕ್ಷ ಕೋಟಿ (ಶೇ 46.7) ಮೊತ್ತವನ್ನು ಸಾಲ ಮರುಪಾವತಿಗೆ ನಿಗದಿಪಡಿಸಲಾಗಿದೆ. ಈ ಎಲ್ಲ ಅಂಕಿ–ಅಂಶಗಳು ಪ‍್ರಧಾನಿ ಶೆಹಬಾಜ್‌ ಷರೀಫ್‌ ನೇತೃತ್ವದ ಸರ್ಕಾರವು ಸಾಲದ ಸುಳಿಯಲ್ಲಿ ಸಿಲುಕಿದೆ ಎಂಬುದನ್ನು ಬಿಂಬಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.