ADVERTISEMENT

ವಿಶ್ವಸಂಸ್ಥೆಯಲ್ಲಿ ಪಾಕ್‌ಗೆ ಮತ್ತೊಮ್ಮೆ ಮುಖಭಂಗ

ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿವಾದ ಪ್ರಸ್ತಾಪ‍

ಪಿಟಿಐ
Published 16 ಜನವರಿ 2020, 20:00 IST
Last Updated 16 ಜನವರಿ 2020, 20:00 IST

ವಿಶ್ವಸಂಸ್ಥೆ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ವಿವಾದವನ್ನು ಪದೇ ಪದೇ ಪ್ರಸ್ತಾಪ ಮಾಡುವ ಪಾಕಿಸ್ತಾನದ ಯತ್ನಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಭದ್ರತಾ ಮಂಡಳಿಯಿಂದ ಬೆಂಬಲ ಪಡೆಯುವ ಪಾಕ್‌ನ ಯತ್ನ ಮತ್ತೊಮ್ಮೆ ವಿಫಲವಾಗಿದೆ.

ಕಾಶ್ಮೀರ ವಿಷಯದ ಮೇಲೆ ಭದ್ರತಾ ಮಂಡಳಿ ಗಮನ ಸೆಳೆಯಲು ಪಾಕಿಸ್ತಾನದ ಜತೆಗೆ ಇದರ ಎಲ್ಲಾ ಕಾಲದ ಗೆಳೆಯ ಚೀನಾ ಮಾತ್ರವೇ ಬೆಂಬಲ ನೀಡಿತ್ತು.

ಕಾಶ್ಮೀರ ವಿವಾದವು ಭಾರತ ಮತ್ತು ಪಾಕಿಸ್ತಾನದ ನಡುವಣ ದ್ವಿಪಕ್ಷೀಯ ವಿಷಯ ಎಂದು ಭದ್ರತಾ ಮಂಡಳಿಯ ಹಲವು ಸದಸ್ಯ ದೇಶಗಳು ಪ್ರತಿಪಾದಿಸುತ್ತಲೇ ಇರುವುದರಿಂದ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ.

ADVERTISEMENT

ಇತರೆ ವಿಷಯಗಳ ಅಡಿ ಚೀನಾ, ಕಾಶ್ಮೀರ ವಿಷಯವನ್ನು ಮಂಡಳಿಯ ಸಲಹಾ ಕೊಠಡಿಯಲ್ಲಿ ಪ್ರಸ್ತಾಪ ಮಾಡಲು ಹೊಸದಾಗಿ ಯತ್ನಿಸಿತ್ತು.

ಕಾಶ್ಮೀರ ವಿಷಯ ಪ್ರಸ್ತಾಪ ಸಂಬಂಧ ಪಾಕ್‌ಗೆ ಹಿನ್ನಡೆಯಾಗಿರುವುದನ್ನು ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಸೈಯದ್‌ ಅಕ್ಬರುದ್ದೀನ್‌ ಸಹ ದೃಢಪಡಿಸಿದ್ದಾರೆ. ಕಾಶ್ಮೀರದಲ್ಲಿ ಸಹಜಸ್ಥಿತಿ ನೆಲೆಸಲು ಕೆಲವು ಕಠಿಣ ಸವಾಲುಗಳನ್ನು ಭಾರತದ ಜತೆ ಪಾಕಿಸ್ತಾನ ನಿವಾರಿಸಿಕೊಳ್ಳಬೇಕಿದೆ ಎಂದೂ ಅವರು ಹೇಳಿದ್ದಾರೆ.

‘ಪಾಕಿಸ್ತಾನದ ಯಾವುದೇ ಪ್ರತಿನಿಧಿಗಳ ವಾದ, ಅಥವಾ ಪ್ರತಿನಿಧಿಗಳ ಆಧಾರರಹಿತ ಆರೋಪವು ವಿಶ್ವಸಂಸ್ಥೆಯ ವೇದಿಕೆಯಲ್ಲಿ ವಿಶ್ವಸಾರ್ಹವಾದುದಲ್ಲ ಎಂಬುದು ಸಾಬೀತಾಯಿತು‘ ಎಂದು ಅಕ್ಬರುದ್ದೀನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.