ADVERTISEMENT

ಎಫ್‌ಎಟಿಎಫ್‌ : ಗ್ರೇ ಪಟ್ಟಿಯಲ್ಲಿ ಉಳಿಯಲಿರುವ ಪಾಕಿಸ್ತಾನ

ಕ್ರಿಯಾ ಯೋಜನೆಯ 27 ಅಂಶಗಳನ್ನು ಪೂರ್ಣವಾಗಿ ಅನುಸರಿಸದ ಆರೋಪ

ಪಿಟಿಐ
Published 21 ಅಕ್ಟೋಬರ್ 2020, 8:28 IST
Last Updated 21 ಅಕ್ಟೋಬರ್ 2020, 8:28 IST
ಪಾಕಿಸ್ತಾನ ನಕ್ಷೆ
ಪಾಕಿಸ್ತಾನ ನಕ್ಷೆ   

ಇಸ್ಲಾಮಾಬಾದ್: ’ಗ್ಲೋಬಲ್ ವಾಚ್‌ ಡಾಗ್ ಸಿದ್ದ ಪಡಿಸಿರುವ ಹಣಕಾಸು ಕ್ರಿಯಾ ಯೋಜನೆಯ(ಎಫ್‌ಎಟಿಎಫ್‌) 27 ಅಂಶಗಳಲ್ಲಿ ಆರು ಅಂಶಗಳನ್ನು ಅನುಸರಿಸುವಲ್ಲಿ ವಿಫಲವಾಗಿರುವ ಪಾಕಿಸ್ತಾನ ಈ ಬಾರಿಯೂ ಹಣಕಾಸು ಕ್ರಿಯಾ ಪಡೆಯ ಗ್ರೇ ಪಟ್ಟಿಯಲ್ಲೇ ಉಳಿಯಲಿದೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇಂದಿನಿಂದ (ಅ.21) 23ರವರೆಗೆ ’ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದು ಮತ್ತು ಅಕ್ರಮ ಹಣ ವರ್ಗಾವಣೆ’ ಕುರಿತು ಪ್ಯಾರಿಸ್‌ ಮೂಲದ ಗ್ಲೋಬಲ್ ವಾಚ್‌ಡಾಗ್‌ ಸಂಸ್ಥೆ ಆಯೋಜಿಸಿರುವ ವರ್ಚುವಲ್ ಪ್ಲೀನರಿ ಅಧಿವೇಶದಲ್ಲಿ, ಈ 27 ಅಂಶಗಳ ಕ್ರಿಯಾ ಯೋಜನೆಯಲ್ಲಿ ಪಾಕಿಸ್ತಾನ ಯಾವ ಸ್ಥಾನದಲ್ಲಿದೆ ಎಂದು ಪ್ರಗತಿ ಪರಿಶೀಲಿಸಲಾಗುತ್ತದೆ.

ಎಫ್‌ಎಟಿಎಫ್‌ ಪಾಕಿಸ್ತಾನವನ್ನು ಜೂನ್ 2018ರಲ್ಲಿ ಗ್ರೇ ಪಟ್ಟಿಗೆ ಸೇರಿಸಿತ್ತು. 2019ರೊಳಗೆ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದು ಮತ್ತು ಅಕ್ರಮ ಹಣ ವರ್ಗಾವಣೆಯನ್ನು ನಿಯಂತ್ರಿಸುವಂತೆ ಕೇಳಿತ್ತು. ಆದರೆ, ಕೋವಿಡ್‌ 19 ಸಾಂಕ್ರಾಮಿಕ ರೋಗದ ಕಾರಣದಿಂದ ಪಾಕಿಸ್ತಾನಕ್ಕೆ ನೀಡಿದ್ದ ಗಡುವನ್ನು ವಿಸ್ತರಿಸಿತ್ತು.

ADVERTISEMENT

’ಮುಂದಿನ ವರ್ಷದ ಜೂನ್ ವೇಳೆಗೆ ಎಫ್‌ಎಟಿಎಫ್‌ನ ಗ್ರೇ ಪಟ್ಟಿಯಿಂದ ನಿರ್ಗಮಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಲಿದೆ’ ಎಂದು ಪಾಕಿಸ್ತಾನದ ರಾಜತಾಂತ್ರಿಕ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. ಅದೇ ವರದಿಯಲ್ಲಿರುವಂತೆ, ’ಪಾಕಿಸ್ತಾನವು ಎಫ್‌ಎಟಿಎಫ್ ಗ್ರೇ ಪಟ್ಟಿಯಿಂದ ಹೊರಬರುವ ಸಾಧ್ಯತೆ ಕಡಿಮೆ’ ಎಂದು ಉಲ್ಲೇಕವಾಗಿದೆ. ’ಆದರೆ ದೇಶವು ಕಪ್ಪುಪಟ್ಟಿಗೆ ಸೇರುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾಗಲಿದೆ’ ಎಂದು ಹೇಳಲಾಗಿದೆ.

’ಪಾಕಿಸ್ತಾನ ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ ಹಾಗೂ ಕ್ರಿಯಾ ಯೋಜನೆಯಲ್ಲಿ 21 ಅಂಶಗಳನ್ನು ಅನುಸರಿಸಲು ಯಶಸ್ವಿಯಾಗಿದೆ’ ಎಂದು ವಾಚ್‌ಡಾಗ್‌ಗೆ ತಿಳಿಸಿರುವುದಾಗಿ ವರದಿಯಲ್ಲಿ ಹೇಳಿದೆ. ’ಕ್ರಿಯಾ ಯೋಜನೆಯ ಉಳಿದ ಆರು ಅಂಶಗಳಲ್ಲಿ ಶೇ 20 ರಷ್ಟು ಪ್ರಗತಿ ಸಾಧಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದೆ’ ಎಂದು ಅದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.