ADVERTISEMENT

ಪಾಕಿಸ್ತಾನದಲ್ಲಿ ಮೀಸಲು ಕ್ಷೇತ್ರದ 27 ಶಾಸಕರ ಅಮಾನತು

ಪಂಜಾಬ್‌ ಪ್ರಾಂತೀಯ ಅಸೆಂಬ್ಲಿಗೆ ನಾಮನಿರ್ದೇಶನ ವಿವಾದ

ಪಿಟಿಐ
Published 11 ಮೇ 2024, 12:56 IST
Last Updated 11 ಮೇ 2024, 12:56 IST
<div class="paragraphs"><p>pak flag</p></div>

pak flag

   

ಲಾಹೋರ್‌: ಮಹಿಳೆಯರು ಮತ್ತು ಅಲ್ಪಸಂಖ್ಯಾತರ ನಾಮನಿರ್ದೇಶನಕ್ಕೆ ಸಂಬಂಧಿಸಿ ಕೆಳ ನ್ಯಾಯಾಲಯ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದ ಕಾರಣ, ಪಂಜಾಬ್‌ ಪ್ರಾಂತೀಯ ಅಸೆಂಬ್ಲಿಯ ಮೀಸಲು ಕ್ಷೇತ್ರಗಳ 27 ಶಾಸಕರನ್ನು ಅಮಾನತು ಮಾಡಲಾಗಿದೆ. 

ಸುಪ್ರೀಂ ಕೋರ್ಟ್‌ ಆದೇಶದಂತೆ, ಅಸೆಂಬ್ಲಿ ಸ್ಪೀಕರ್ ಮಲಿಕ್‌ ಮೊಹ‌ಮ್ಮದ್ ಅಹ್ಮದ್‌ ಖಾನ್‌ ಈ ಕ್ರಮ ಕೈಗೊಂಡಿದ್ದಾರೆ. 

ADVERTISEMENT

‘ಪಾಕಿಸ್ತಾನ ಚುನಾವಣಾ ಆಯೋಗದ ಹಳೆಯ ಅಧಿಸೂಚನೆ ಆಧಾರದ ಮೇಲೆ ಅಸೆಂಬ್ಲಿಗೆ ನೇಮಕಗೊಂಡಿರುವ ಮುಸ್ಲಿಮೇತರ ಸದಸ್ಯರನ್ನು ಅಮಾನತು ಮಾಡಲಾಗಿದೆ’ ಎಂದು ಸ್ಪೀಕರ್‌ ಖಾನ್‌ ರೂಲಿಂಗ್‌ನಲ್ಲಿ ತಿಳಿಸಿದ್ದಾರೆ ಎಂದು ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.

ಈ ರೂಲಿಂಗ್‌ ಪ್ರಕಾರ, ಈ ನೇಮಕಾತಿ ಕುರಿತು ಚುನಾವಣಾ ಆಯೋಗ ಅಥವಾ ಸುಪ್ರೀಂ ಕೋರ್ಟ್‌ ಸ್ಪಷ್ಟೀಕರಣ ನೀಡುವವರೆಗೆ ಮುಸ್ಲಿಮೇತರರು ಈ ಸದನದ ಸದಸ್ಯರಾಗಿ ಕಾರ್ಯ ನಿರ್ವಹಿಸುವಂತಿಲ್ಲ ಇಲ್ಲವೇ ಕಲಾಪದಲ್ಲಿ ಪಾಲ್ಗೊಳ್ಳುವಂತಿಲ್ಲ.

ಈ ಬೆಳವಣಿಗೆಯು, ಆಡಳಿತಾರೂಢ ಪಿಎಂಎಲ್‌–ಎನ್‌ ನೇತೃತ್ವದ ಮೈತ್ರಿ ಸರ್ಕಾರಕ್ಕಾದ ಭಾರಿ ಹಿನ್ನೆಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಾಂತೀಯ ಅಸೆಂಬ್ಲಿಯ ಮೀಸಲು ಕ್ಷೇತ್ರಗಳಿಗೆ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ತನ್ನ ಪಾಲಿನ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿಲ್ಲ ಎಂದು ಸುನ್ನಿ ಇತ್ತೇಹಾದ್‌ ಕೌನ್ಸಿಲ್‌(ಎಸ್‌ಐಸಿ) ತಕರಾರು ಎತ್ತಿತ್ತು. ಎಸ್‌ಐಸಿಗೆ ಕ್ಷೇತ್ರಗಳನ್ನು ಹಂಚಿಕೆ ಮಾಡದ ಕ್ರಮವನ್ನು ಕೆಳ ನ್ಯಾಯಾಲಯ ಎತ್ತಿ ಹಿಡಿದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಶುಕ್ರವಾರ ನಡೆದ ಕಲಾಪದ ವೇಳೆ, ವಿರೋಧ ಪಕ್ಷವಾದ ಪಿಟಿಐ ಬೆಂಬಲಿತ ಎಸ್‌ಐಸಿಯ ಶಾಸಕ ರಾಣಾ ಅಫ್ತಾಬ್‌ ಈ ವಿಷಯವನ್ನು ಪ್ರಸ್ತಾಪಿಸಿ, ಮೀಸಲು ಕ್ಷೇತ್ರಗಳಿಗೆ ನಾಮನಿರ್ದೇಶನ ಮಾಡುವಂತೆ ಕೌನ್ಸಿಲ್‌ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿರಲಿಲ್ಲ ಅಥವಾ ತನ್ನ ಸದಸ್ಯರನ್ನು ಕಣಕ್ಕಿಳಿಸಿರಲಿಲ್ಲ. ಹೀಗಾಗಿ, ಈ ಶಾಸಕರನ್ನು ಅಮಾನತು ಮಾಡುವಂತೆ ಕೋರಿದ್ದರು.

ಸುನ್ನಿ ಇತ್ತೇಹಾದ್ ಕೌನ್ಸಿಲ್‌ನ ಸ್ಥಾನಗಳನ್ನು ಇತರ ಪಕ್ಷಗಳಿಗೆ ಹಂಚಿಕೆ ಮಾಡಿದ್ದ ಚುನಾವಣಾ ಆಯೋಗದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಿದೆ ಎಂದೂ ರಾಣಾ ಅವರು ಸ್ಪೀಕರ್‌ ಗಮನಕ್ಕೆ ತಂದಿದ್ದರು. 

ಈ ವಿಚಾರವಾಗಿ ಅಡ್ವೊಕೇಟ್‌ ಜನರಲ್‌ ಹಾಗೂ ಕಾನೂನು ಇಲಾಖೆ ಅಭಿಪ್ರಾಯ ಪಡೆದ ನಂತರ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಸ್ಪೀಕರ್ ಖಾನ್‌, ಸುಪ್ರೀಂ ಕೋರ್ಟ್‌ನ ಆದೇಶವನ್ನು ಸದನದಲ್ಲಿ ಪ್ರಸ್ತಾಪಿಸಿ, 27 ಶಾಸಕರನ್ನು ಅಮಾನತುಗೊಳಿಸಿದ್ದಾಗಿ ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.