ADVERTISEMENT

ಪಾಕ್ ಚುನಾವಣೆಯಲ್ಲಿ ಉಗ್ರ ಹಫೀಜ್ ಸಯೀದ್ ಬೆಂಬಲಿತ ಪಕ್ಷ, ಪುತ್ರನೂ ಕಣಕ್ಕೆ

ಪಿಟಿಐ
Published 26 ಡಿಸೆಂಬರ್ 2023, 10:09 IST
Last Updated 26 ಡಿಸೆಂಬರ್ 2023, 10:09 IST
<div class="paragraphs"><p>ಹಫೀಜ್ ಸಯೀದ್ </p></div>

ಹಫೀಜ್ ಸಯೀದ್

   

ಲಾಹೋರ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್‌–ಎ– ತಯಬಾ (ಎಲ್‌ಇಟಿ) ಮುಖ್ಯಸ್ಥ, 26/11 ಮುಂಬೈ ದಾಳಿಯ ರೂವಾರಿ, ಭಯೋತ್ಪಾದಕ ಹಫೀಜ್ ಸಯೀದ್ ಬೆಂಬಲಿತ ಪಕ್ಷವು ಪಾಕಿಸ್ತಾನದಲ್ಲಿ ಫೆಬ್ರುವರಿ 8ರಂದು ನಡೆಯಲಿರುವ ನ್ಯಾಶನಲ್ ಅಸೆಂಬ್ಲಿ ಮತ್ತು ಪ್ರಾದೇಶಿಕ ಶಾಸನ ಸಭೆಗಳ ಚುನಾವಣೆಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಆರೋಪದಡಿ ಎಲ್‌ಇಟಿ ಸ್ಥಾಪಕ ಹಫೀಜ್ ಸಯೀದ್‌ಗೆ ಹಲವು ವರ್ಷಗಳ ಜೈಲು ಶಿಕ್ಷೆಯಾಗಿದ್ದು, 2019ರಿಂದಲೂ ಜೈಲಿನಲ್ಲೇ ಇದ್ದಾನೆ.

ADVERTISEMENT

ಪಾಕಿಸ್ತಾನ ಮರ್ಕಾಜಿ ಮುಸ್ಲಿಂ ಲೀಗ್‌(ಪಿಎಂಎಂಎಲ್) ರಾಜಕೀಯ ಪಕ್ಷವನ್ನು ಹಫೀಜ್ ಸಯೀದ್ ಸ್ಥಾಪಿಸಿದ್ದು, ಪಕ್ಷದ ಚಿಹ್ನೆಯಾಗಿ ಕುರ್ಚಿ ನೀಡಲಾಗಿದೆ ಎಂದು ವರದಿ ತಿಳಿಸಿದೆ.

ನಮ್ಮ ಪಕ್ಷವು ನ್ಯಾಶನಲ್ ಅಸೆಂಬ್ಲಿ ಮತ್ತು ಪ್ರಾದೇಶಿಕ ಶಾಸನ ಸಭೆಗಳ ಬಹುತೇಕ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಿಎಂಎಂಎಲ್ ಪಕ್ಷದ ಅಧ್ಯಕ್ಷ ಖಾಲೀದ್ ಮಸೂದ್ ಸಿಂಧು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ನಾವು ಅಧಿಕಾರಕ್ಕೆ ಬರಬೇಕೆಂದು ಇಚ್ಛಿಸುತ್ತಿರುವುದು ಭ್ರಷ್ಟಾಚಾರ ಎಸಗಲಲ್ಲ. ಬದಲಾಗಿ, ಜನರ ಸೇವೆ ಮಾಡುವುದು ಮತ್ತು ಪಾಕಿಸ್ತಾನವನ್ನು ಇಸ್ಲಾಂ ಕಲ್ಯಾಣ ದೇಶವನ್ನಾಗಿ ರೂಪಿಸುವುದಾಗಿದೆ ಎಂದು ಅವರು ಹೇಳಿದ್ದಾರೆ.

ಸ್ವತಃ ಸಿಂಧು ಸಹ ಲಾಹೋರ್‌ನ ಎನ್‌ಎ–130 ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಇದೇ ಕ್ಷೇತ್ರದಲ್ಲಿ ಪಾಕಿಸ್ತಾನ ಮುಸ್ಲಿಂ ಲೀಗ್– ನವಾಜ್ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ನವಾಜ್ ಷರೀಫ್ ಸಹ ಕಣಕ್ಕಿಳಿದಿದ್ದಾರೆ.

ಹಫೀಜ್ ಸಯೀದ್ ಮಗ ತಲ್ಹಾ ಸಯೀದ್, ಲಾಹೋರ್‌ನ ಎನ್‌ಎ–127 ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.

ಆದರೆ, ಹಫೀಜ್ ಸಯೀದ್‌ ಜೊತೆ ತಮ್ಮ ಪಕ್ಷದ ನಂಟನ್ನು ಸಿಂಧು ನಿರಾಕರಿಸಿದ್ದಾರೆ. ಪಕ್ಷಕ್ಕೆ ಹಫೀಜ್ ಬೆಂಬಲ ಇಲ್ಲ ಎಂದು ಹೇಳಿದ್ದಾರೆ.

2018ರ ಚುನಾವಣೆಯಲ್ಲಿ ಜೆಯುಡಿ ಬೆಂಬಲಿತ ಮಿಲ್ಲಿ ಮುಸ್ಲಿಂ ಲೀಗ್(ಎಂಎಂಎಲ್) ಎಲ್ಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಒಂದೂ ಕ್ಷೇತ್ರ ಗೆಲ್ಲಲು ಸಾಧ್ಯವಾಗಿರಲಿಲ್ಲ.

ಸದ್ಯ, ಎಂಎಂಎಲ್ ಪಕ್ಷಕ್ಕೆ ನಿಷೇಧ ಹೇರಿರುವುದರಿಂದ ಈ ಬಾರಿ ಪಿಎಂಎಂಎಲ್ ಪಕ್ಷವನ್ನು ಸ್ಥಾಪಿಸಲಾಗಿದೆ.

ಹಫೀಜ್ ಸಯೀದ್‌ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸಿರುವ ಅಮೆರಿಕ, ಅವನ ಬಗ್ಗೆ ಸುಳಿವು ನೀಡಿದವರಿಗೆ 10 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.