ADVERTISEMENT

ಶಾಂತಿ ಕಾಯ್ದುಕೊಂಡರೆ ಭಾರತಕ್ಕೆ ಹೆಚ್ಚು ಆರ್ಥಿಕ ಲಾಭ: ಇಮ್ರಾನ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 14:10 IST
Last Updated 17 ಮಾರ್ಚ್ 2021, 14:10 IST
ಇಮ್ರಾನ್ ಖಾನ್
ಇಮ್ರಾನ್ ಖಾನ್   

ಇಸ್ಲಾಮಾಬಾದ್: ‘ನಮ್ಮ ದೇಶದೊಂದಿಗೆ ಶಾಂತಿ ಕಾಯ್ದುಕೊಂಡರೆ ಭಾರತಕ್ಕೆ ಆರ್ಥಿಕವಾಗಿ ಹೆಚ್ಚು ಲಾಭವಾಗಲಿದೆ’ ಎಂದುಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ಹೇಳಿದ್ದಾರೆ.

ಇಸ್ಲಾಮಾಬಾದ್‌ನ ಭದ್ರತೆ ಕುರಿತ ಎರಡು ದಿನಗಳ ಚರ್ಚೆಯ ಉದ್ಘಾಟನಾ ಭಾಷಣ ಮಾಡಿದ ಖಾನ್, 2018ರಲ್ಲಿ ಅಧಿಕಾರಕ್ಕೆ ಬಂದ ನಂತರ ತಮ್ಮ ಸರ್ಕಾರವು ಭಾರತದೊಂದಿಗೆ ಉತ್ತಮ ಸಂಬಂಧ ಸ್ಥಾಪಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದೆ. ಭಾರತ ಸಹ ಪರಸ್ಪರ ಸಂಬಂಧ ಕಾಯ್ದುಕೊಳ್ಳಲು ಸಹಕರಿಸಿದೆ ಎಂದು ಅವರು ಹೇಳಿದ್ದಾರೆ.

ತೈಲ ಮತ್ತು ಅನಿಲ ಸಂಪನ್ಮೂಲದಲ್ಲಿ ಶ್ರೀಮಂತವಾಗಿರುವ ಮಧ್ಯ ಏಷ್ಯಾದ ರಾಷ್ಟ್ರಗಳಾದ ಕಜಕಿಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ, ತುರ್ಕಮೆನಿಸ್ತಾನ್‌ ಹಾಗೂ ಉಜ್ಬೆಕಿಸ್ತಾನಗಳಿಗೆ ಭಾರತವು ಪಾಕಿಸ್ತಾನದ ಮೂಲಕ ನೇರ ಸಂಪರ್ಕ ಸಾಧಿಸಿ ವ್ಯವಹರಿಸಿದರೆ, ಭಾರತಕ್ಕೂ ಆರ್ಥಿಕವಾಗಿ ಲಾಭವಾಗಲಿದೆ ಎಂದು ಖಾನ್‌ ಹೇಳಿದ್ದಾರೆ.

ADVERTISEMENT

‘ಬಗೆಹರಿಯದ ಕಾಶ್ಮೀರ ವಿಷಯವು ಉಭಯ ದೇಶಗಳ ನಡುವಿನ ಶಾಂತಿಗೆ ದೊಡ್ಡ ಅಡ್ಡಿಯಾಗಿದೆ. ವಿಶ್ವಸಂಸ್ಥೆಯ ನಿರ್ಣಯಗಳ ಅಡಿಯಲ್ಲಿ ಭಾರತವು ಕಾಶ್ಮೀರಿಗಳಿಗೆ ತಮ್ಮ ಹಕ್ಕನ್ನು ನೀಡಿದರೆ, ಅದು ಪಾಕಿಸ್ತಾನಕ್ಕೆ ಮಾತ್ರವಲ್ಲದೆ ಭಾರತಕ್ಕೂ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಗಡಿಯಲ್ಲಿ ಶಾಂತಿ ನೆಲೆಸಿದ ನಂತರ ಭಾರತ ಮಧ್ಯ ಏಷ್ಯಾಕ್ಕೆ ಸುಲಭವಾಗಿ ಕಾಲಿಡಬಹುದು’ ಎಂದು ಖಾನ್‌ ಹೇಳಿದ್ದಾರೆ.

‘ಎಲ್ಲದಕ್ಕೂ ಭಾರತ ಮೊದಲ ಹೆಜ್ಜೆ ಇಡಬೇಕಾಗುತ್ತದೆ. ಭಾರತ ಹಾಗೆ ಮಾಡದಿದ್ದರೆ, ನಾವು ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ’ ಎಂದು ಅವರು ಪ್ರತಿಪಾದಿಸಿದ್ದಾರೆ.

ಭಯೋತ್ಪಾದನೆ, ದ್ವೇಷ ಮತ್ತು ಹಿಂಸಾಚಾರ ಮುಕ್ತ ವಾತಾವರಣದ ಸಂಬಂಧವನ್ನು ನೆರೆಯ ಪಾಕಿಸ್ತಾನದೊಂದಿಗೆ ಬಯಸುತ್ತೇವೆ. ಭಯೋತ್ಪಾದನೆ ಮತ್ತು ಹಗೆತನವಿಲ್ಲದ ವಾತಾವರಣವನ್ನು ಸೃಷ್ಟಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಭಾರತ ಕಳೆದ ತಿಂಗಳು ಹೇಳಿತ್ತು.

‘ಭಯೋತ್ಪಾದನೆ ಮತ್ತು ಮಾತುಕತೆ’ ಒಟ್ಟಿಗೆ ಸಾಗಲು ಸಾಧ್ಯವಿಲ್ಲ. ದೇಶದ ಮೇಲೆ ದಾಳಿ ನಡೆಸಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸುವ ಮೂಲಕ ಪಾಕಿಸ್ತಾನ ತನ್ನ ಜವಾಬ್ದಾರಿಯನ್ನು ಮೆರೆಯಬೇಕು ಎಂದು ಭಾರತವು ಪಾಕಿಸ್ತಾನಕ್ಕೆ ಒತ್ತಿಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.