ADVERTISEMENT

ಡ್ಯಾನಿಶ್ ಸಿದ್ಧಿಕಿಯನ್ನು ತಾಲಿಬಾನಿಗಳು ಕ್ರೂರವಾಗಿ ಕೊಂದಿದ್ದಾರೆ: ವರದಿ

ಪಿಟಿಐ
Published 30 ಜುಲೈ 2021, 6:12 IST
Last Updated 30 ಜುಲೈ 2021, 6:12 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ವಾಷಿಂಗ್ಟನ್: ಭಾರತೀಯ ಫೋಟೊ ಜರ್ನಲಿಸ್ಟ್‌, ರಾಯಿಟರ್ಸ್‌ ಸುದ್ದಿ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದ ಡ್ಯಾನಿಷ್ ಸಿದ್ದಕಿ ಅಫ್ಗಾನಿಸ್ತಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕೊಲ್ಲಲ್ಪಟ್ಟಿಲ್ಲ, ಅವರ ಗುರುತನ್ನು ಪರಿಶೀಲಿಸಿದ ನಂತರ ತಾಲಿಬಾನಿಗಳು ‘ಕ್ರೂರವಾಗಿ ಹತ್ಯೆ ಮಾಡಿದ್ದಾರೆ’ ಎಂದು ಅಮೆರಿಕ ಮೂಲದ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ವರದಿ ತಿಳಿಸಿದೆ.

38 ವರ್ಷದ ಸಿದ್ದಿಕಿ ಅವರು ಅಫ್ಗಾನಿಸ್ತಾನದ ಕಂದಹಾರ್‌ನ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಆಫ್ಗಾನ್ ಪಡೆಗಳು ಮತ್ತು ತಾಲಿಬಾನ್ ನಡುವಿನ ಘರ್ಷಣೆಯನ್ನು ವರದಿ ಮಾಡುತ್ತಿದ್ದಾಗ ಹತ್ಯೆಯಾಗಿದ್ದರು ಎಂದು ಈ ಹಿಂದೆ ವರದಿಯಾಗಿತ್ತು.

ವಾಷಿಂಗ್ಟನ್ ಎಕ್ಸಾಮಿನರ್ ಮ್ಯಾಗಜಿನ್ ವರದಿಯ ಪ್ರಕಾರ, ಪಾಕಿಸ್ತಾನಕ್ಕೆ ಸಂಪರ್ಕ ಕಲ್ಪಿಸುವ ಗಡಿ ನಿಯಂತ್ರಿಸುವ ವಿಚಾರವಾಗಿ ಆಫ್ಗಾನ್ ಪಡೆಗಳು ಮತ್ತು ತಾಲಿಬಾನ್ ನಡುವೆ ನಡೆಯುತ್ತಿದ್ದ ಸಂಘರ್ಷವನ್ನು ವರದಿ ಮಾಡಲು ಸಿದ್ದಿಕಿ ಆಫ್ಗಾನ್ ರಾಷ್ಟ್ರೀಯ ಸೇನಾ ಪಡೆಯೊಂದಿಗೆ ಸ್ಪಿನ್ ಬೋಲ್ಡಾಕ್ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದರು.

ADVERTISEMENT

ಕಸ್ಟಮ್ಸ್ ಪೋಸ್ಟ್ ಸ್ವಲ್ಪ ದೂರದಲ್ಲಿರುವಾಗ ತಾಲಿಬಾನ್ ದಾಳಿಯಿಂದಾಗಿ ಸೇನಾ ತಂಡ ಚದುರಿತು. ಈ ಸಂದರ್ಭ ಸೇನಾ ಕಮಾಂಡರ್‌ಗಳು ಸಿದ್ದಿಕಿಯಿಂದ ಬೇರ್ಪಟ್ಟರು. ಬಳಿಕ, ಅವರು ಇತರ ಮೂವರು ಅಫ್ಗನ್ ಸೈನಿಕರ ಜೊತೆ ಇದ್ದರು.

ದಾಳಿ ತೀವ್ರಗೊಳ್ಳುತ್ತಿದ್ದಂತೆ ಸಿದ್ಧಿಕಿ ಮತ್ತು ಮೂವರು ಸೈನಿಕರು ಸಮೀಪದ ಮಸೀದಿಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಆಶ್ರಯ ಪಡೆದಿದ್ದರು. ಒಬ್ಬ ಪತ್ರಕರ್ತ ಮಸೀದಿಯಲ್ಲಿದ್ದಾನೆಂಬ ಸುದ್ದಿ ಹರಡುತ್ತಿದ್ದಂತೆ, ತಾಲಿಬಾನ್ ದಾಳಿ ಮಾಡಿತು. ಸ್ಥಳೀಯ ತನಿಖೆಯ ಪ್ರಕಾರ, ಅಲ್ಲಿ ಸಿದ್ಧಿಕಿ ಇದ್ದಾರೆಂಬ ಕಾರಣದಿಂದಲೇ ತಾಲಿಬಾನ್, ಮಸೀದಿಯ ಮೇಲೆ ದಾಳಿ ಮಾಡಿದೆ ಎಂದು ತಿಳಿದುಬಂದಿರುವುದಾಗಿ ಮ್ಯಾಗಜಿನ್ ತಿಳಿಸಿದೆ.

‘ತಾಲಿಬಾನಿಗಳು ಸೆರೆ ಹಿಡಿದಾಗ ಸಿದ್ದಿಕಿ ಜೀವಂತವಾಗಿದ್ದರು. ಈ ಸಂದರ್ಭ ತಾಲಿಬಾನ್ ಉಗ್ರರು, ಸಿದ್ದಿಕಿ ಅವರ ಗುರುತನ್ನು ಪರಿಶೀಲಿಸಿ ಕೊಂದು ಹಾಕಿದೆ. ಸಿದ್ಧಿಕಿಯನ್ನು ರಕ್ಷಿಸಲು ಯತ್ನಿಸಿದ ಕಮಾಂಡರ್ ಮತ್ತು ಅವರ ತಂಡದ ಉಳಿದ ಸೈನಿಕರನ್ನೂ ತಾಲಿಬಾನಿಗಳು ಹತ್ಯೆ ಮಾಡಿದ್ದಾರೆ.’ ಎಂದು ಅದು ಹೇಳಿದೆ.

‘ವ್ಯಾಪಕವಾಗಿ ಹರಿದಾಡುತ್ತಿರುವ ಚಿತ್ರದಲ್ಲಿ ಸಿದ್ದಿಕಿ ಅವರ ಮುಖವನ್ನು ಗುರುತಿಸಬಹುದಾಗಿದೆ. ನಾನು ಇತರ ಛಾಯಾಚಿತ್ರಗಳನ್ನು ಪರಿಶೀಲಿಸಿದ್ದೇನೆ ಮತ್ತು ಸಿದ್ದಿಕಿ ಅವರ ಮೃತದೇಹದ ವಿಡಿಯೊವನ್ನು ಭಾರತ ಸರ್ಕಾರದ ಮೂಲವೊಂದು ನನಗೆ ಒದಗಿಸಿದೆ. ಅದರಲ್ಲಿ, ತಾಲಿಬಾನಿಗಳು ಸಿದ್ದಿಕಿ ಅವರ ತಲೆಗೆ ಬಲವಾಗಿ ಹೊಡೆದು ನಂತರ ಗುಂಡು ಹಾರಿಸಿದ್ದಾರೆ ಎಂಬಂತೆ ತೋರುತ್ತಿದೆ.’ ಎಂದು ಅಮೆರಿಕನ್ ಎಂಟರ್‌ಪ್ರೈಸಸ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಲೇಖಕರಾದ ಮೈಕಲ್ ರೂಬಿನ್ ಬರೆದಿದ್ದಾರೆ.

ತಾಲಿಬಾನಿಗಳು ಸಿದ್ದಿಕಿಯನ್ನು ಕ್ರೂರವಾಗಿ ಕೊಂದು, ಆ ಬಳಿಕವೂ ಶವವನ್ನು ವಿರೂಪಗೊಳಿಸಿದ್ದಾರೆ. ಇದು ಜಾಗತಿಕ ಸಮುದಾಯದ ನಡವಳಿಕೆಯನ್ನು ನಿಯಂತ್ರಿಸುವ ಯುದ್ಧದ ನಿಯಮಗಳನ್ನು ಅಥವಾ ಸಂಪ್ರದಾಯಗಳನ್ನು ತಾಲಿಬಾನ್ ಗೌರವಿಸುವುದಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ವರದಿ ತಿಳಿಸಿದೆ.

ಮುಂಬೈ ಮೂಲದ ಸಿದ್ಧಿಕಿ, ರೊಹಿಂಗ್ಯಾ ಬಿಕ್ಕಟ್ಟಿನ ಕುರಿತಾಗಿ ಮಾಡಿದ ವರದಿಗೆ 2018ರಲ್ಲಿ ಪುಲಿಟ್ಜರ್ ಪ್ರಶಸ್ತಿ ಪಡೆದಿದ್ದರು. ಅಫ್ಗಾನಿಸ್ತಾನದ ಸಂಘರ್ಷ, ಹಾಂಕಾಂಗ್ ಪ್ರತಿಭಟನೆಗಳು ಮತ್ತು ಏಷ್ಯಾ, ಮಧ್ಯ ಪ್ರಾಚ್ಯ ಹಾಗೂ ಯುರೋಪ್‌ನ ಇತರ ಪ್ರಮುಖ ಘಟನೆಗಳ ಬಗ್ಗೆ ವರದಿ ಮಾಡಿದ್ದ ಖ್ಯಾತಿ ಹೊಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.