ADVERTISEMENT

ಪಾಕ್‌ ಸಂಸದರ ನಿಯೋಗದ ವಿಮಾನ ಕಾಬೂಲ್‌ನಿಂದ ವಾಪಸ್‌

ವಿಮಾನ ನಿಲ್ದಾಣದ ಬಳಿ ಸ್ಫೋಟಕ ಪತ್ತೆ

ಪಿಟಿಐ
Published 9 ಏಪ್ರಿಲ್ 2021, 14:09 IST
Last Updated 9 ಏಪ್ರಿಲ್ 2021, 14:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನ ಸಂಸತ್‌ನ ಸ್ಪೀಕರ್ ಮತ್ತು ಸಂಸದರ ನಿಯೋಗವಿದ್ದ ವಿಮಾನವನ್ನು ಕಾಬೂಲ್‌ ವಿಮಾನ ನಿಲ್ದಾಣದ ಬಳಿ ಸ್ಫೋಟಕಗಳು ಪತ್ತೆಯಾದ ಕಾರಣಕ್ಕೆ ಇಳಿಯಲು ಅನುಮತಿ ನೀಡದೆ ವಾಪಸ್‌ ಕಳುಹಿಸಿದ ಘಟನೆ ನಡೆದಿದೆ.

ಅಫ್ಗಾನ್‌ನ ಸ್ಪೀಕರ್ ವೊಲೆಸಿ ಜಿರ್ಗಾ ಮಿರ್ ರೆಹಮಾನ್ ರೆಹಮನಿ ಅವರ ವಿಶೇಷ ಆಹ್ವಾನದ ಮೇರೆಗೆ ಪಾಕ್‌ ಸ್ಪೀಕರ್ ಅಸಾದ್ ಖೈಸರ್ ಅವರ ನೇತೃತ್ವದ ಒಂಬತ್ತು ಸದಸ್ಯರ ಸಂಸದೀಯ ನಿಯೋಗ ಮೂರು ದಿನಗಳ ಭೇಟಿಗಾಗಿ ಕಾಬೂಲ್‌ಗೆ ತೆರಳಿತ್ತು.

ವಿಮಾನ ನಿಲ್ದಾಣದಲ್ಲಿ ಇಳಿಯಲು ಸಜ್ಜಾಗಿದ್ದಾಗ ನಿಲ್ದಾಣದ ನಿಯಂತ್ರಣ ಕೊಠಡಿಯಿಂದ ಭದ್ರತೆಯ ಕಾರಣಕ್ಕಾಗಿ ಕಾಬೂಲ್ ವಿಮಾನ ನಿಲ್ದಾಣ ಮುಚ್ಚುವ ಬಗ್ಗೆ ಮಾಹಿತಿ ಬಂದಿತು. ಇದನ್ನು ಪಾಕ್‌ ಸ್ಪೀಕರ್‌ ನಿಯೋಗದ ಸದಸ್ಯರಿಗೂ ತಿಳಿಸಲಾಯಿತು ಎಂದು ‘ಡಾನ್ ನ್ಯೂಸ್’ ವರದಿ ಮಾಡಿದೆ.

ADVERTISEMENT

ವಿಮಾನ ನಿಲ್ದಾಣದ ಸಮೀಪದ ಕಟ್ಟಡದ ಕೆಳಗೆ ಪತ್ತೆಯಾದ ಸ್ಫೋಟಕಗಳನ್ನು ಸ್ಥಳಾಂತರಿಸುತ್ತಿರುವ ಕಾರಣಕ್ಕೆ ಖೈಸರ್‌ ಅವರಿದ್ದ ವಿಮಾನವನ್ನು ವಾಪಸ್‌ ಕಳುಹಿಸಲಾಗಿದೆ ಎಂದು ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಎಚ್‌ಕೆಐಆರ್) ಕಮಾಂಡರ್ ರಿಯಾಜ್ ಏರಿಯನ್, ಅಫ್ಘಾನಿಸ್ತಾನದ ಟೊಲೊ ನ್ಯೂಸ್‌ಗೆ ತಿಳಿಸಿದ್ದಾರೆ.

‘ಎಚ್‌ಕೆಐಎ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣದ ಸಮಯದಲ್ಲಿ, ನೆಲ ಅಗೆಯಲು ತಂದಿದ್ದ ಸ್ಫೋಟಕಗಳನ್ನು ಬಳಸದೆ ನಿರುಪಯೋಗಿ ಜಾಗದಲ್ಲಿ ಹೂಳಲಾಗಿತ್ತು. ನ್ಯಾಟೊ ಪಡೆಯ ಅಧಿಕಾರಿಗಳು ನೆಲ ಅಗೆಯುವ ಯಂತ್ರದಲ್ಲಿ ಕೆಲಸ ಮಾಡುವಾಗ ಈ ಸ್ಫೋಟಕಗಳು ಪತ್ತೆಯಾಗಿವೆ. ಟರ್ಕಿಯ ಮಿಲಿಟರಿ ಸ್ಫೋಟಕ ತಜ್ಞರು, ಈ ಸ್ಫೋಟಕಗಳನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸಿದ ಸ್ವಲ್ಪ ಸಮಯದ ನಂತರ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆ ಪುನರಾರಂಭವಾಯಿತು’ ಎಂದು ಅವರು ಹೇಳಿದ್ದಾರೆ.

ಅಫ್ಗಾನಿಸ್ಥಾನದ ಸ್ವೀಕರ್‌ ಫಜಲ್‌ ಹಾಡಿ, ಪಾಕ್‌ನ ಖೈಸರ್‌ ಅವರಿಗೆ ದೂರವಾಣಿ ಕರೆ ಮಾಡಿ, ಪರಿಸ್ಥಿತಿಯನ್ನು ಮನವರಿಕೆ ಮಾಡಿದ್ದಾರೆ. ಶೀಘ್ರದಲ್ಲೇ ಅಫ್ಗಾನಿಸ್ಥಾನಕ್ಕೆ ಪಾಕ್‌ ಸಂಸದರ ನಿಯೋಗ ಕೊಂಡೊಯ್ಯುವುದಾಗಿ ಖೈಸರ್‌ ಹೇಳಿದ್ದಾರೆ. ಅಫ್ಗಾನಿಸ್ತಾನದ ಶಾಂತಿಗಾಗಿ ಪಾಕಿಸ್ತಾನ ತನ್ನ ಪಾತ್ರ ಮುಂದುವರಿಸಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.