ಕಾಬೂಲ್: ಪೂರ್ವಅಫ್ಗಾನಿಸ್ತಾನದ ಘಜ್ನಿಯಲ್ಲಿ ಸೋಮವಾರ ವಿಮಾನವೊಂದು ಅಪಘಾತಕ್ಕೀಡಾಗಿದ್ದು, ಸಾವಿಗೀಡಾದವರ ಕುರಿತು ಇನ್ನೂ ವಿವರಗಳು ಸ್ಪಷ್ಟವಾಗಿಲ್ಲ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದ ಭಗ್ನಾವಶೇಷಗಳನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ವಿಮಾನ ಅಪಘಾತಕ್ಕೀಡಾಗಿರುವ ಪ್ರದೇಶವು ತಾಲಿಬಾನ್ ನಿಯಂತ್ರಣದಲ್ಲಿದೆ ಎಂದು ಮೂಲಗಳು ತಿಳಿಸಿವೆ.ವಿಮಾನ ಅಪಘಾತದ ವರದಿಗಳ ಕುರಿತು ಅಮೆರಿಕದ ಸೇನೆಯು ತನಿಖೆ ನಡೆಸುತ್ತಿದೆ ಎಂದು ಅಮೆರಿಕದ ಸೇನಾ ಮುಖ್ಯಸ್ಥ ಬೆತ್ ರಿಯೋರ್ಡಾನ್ ತಿಳಿಸಿದ್ದಾರೆ.
‘ಅಮೆರಿಕದ ಸೇನಾ ವಿಮಾನವನ್ನು ಹೊಡೆದುರುಳಿಸಿ, ವಿಮಾನದಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಕೊಂದಿರುವುದಾಗಿ’ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿಕೆ ನೀಡಿದ್ದರೆ, ಮತ್ತೊಂದು ವರದಿ ಪ್ರಕಾರ, ವಿಮಾನ ಪತನಕ್ಕೀಡಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ. ಈ ಬಗ್ಗೆ ಗೊಂದಲಗಳು ಮುಂದುವರಿದಿವೆ.
ಈ ವಿಮಾನವನ್ನು ಅಫ್ಗಾನಿಸ್ತಾನದ ಸರ್ಕಾರಿ ಸ್ವಾಮ್ಯದ ಅರಿಯಾನಾ ಆಫ್ಗನ್ ಏರ್‌ಲೈನ್ಸ್ ನಿರ್ವಹಿಸುತ್ತಿತ್ತು ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಈ ಮಾಹಿತಿಯನ್ನು ನಿರಾಕರಿಸಿರುವ ಏರ್‌ಲೈನ್ಸ್‌ನ ಕಾರ್ಯನಿರ್ವಹಣಾಧಿಕಾರಿ ಮಿರ್ವಾಯಿಸ್ ಮಿರ್ಜಾಕ್ವಾಲ್, ‘ವಿಮಾನವೊಂದು ಅಪಘಾತಕ್ಕೀಡಾಗಿದೆ. ಆದರೆ, ಅರಿಯಾನಾ ಏರ್‌ಲೈನ್ಸ್‌ಗೆ ಸೇರಿದ್ದಲ್ಲ. ಅರಿಯಾನಾದಿಂದ ಇಂದು ಹೆರಾತ್–ಕಾಬೂಲ್ ಮತ್ತು ಹೆರಾತ್–ದೆಹಲಿಗೆ ಪ್ರಯಾಣಿಸಿರುವ ಎರಡು ವಿಮಾನಗಳು ಸುರಕ್ಷಿತವಾಗಿವೆ’ ಎಂದು ರಾಯಿಟರ್ಸ್‌ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.