ADVERTISEMENT

ಇಥಿಯೋಪಿಯಾ ವಿಮಾನ ದುರಂತ: ಸುರಕ್ಷತೆ ಪ್ರಶ್ನಿಸಿದ ರಾಷ್ಟ್ರಗಳು

ಪಿಟಿಐ
Published 11 ಮಾರ್ಚ್ 2019, 19:50 IST
Last Updated 11 ಮಾರ್ಚ್ 2019, 19:50 IST
ವಿಮಾನ ದುರಂತದಲ್ಲಿ ಮಡಿದ ಹಿರಿಯ ಗಗನಸಖಿ ಸಾರಾ ಗೆಬ್ರೆಮೈಕಲ್‌ ಸಂಬಂಧಿಕರ ರೋದನ ರಾಯಿಟರ್ಸ್‌ ಚಿತ್ರ
ವಿಮಾನ ದುರಂತದಲ್ಲಿ ಮಡಿದ ಹಿರಿಯ ಗಗನಸಖಿ ಸಾರಾ ಗೆಬ್ರೆಮೈಕಲ್‌ ಸಂಬಂಧಿಕರ ರೋದನ ರಾಯಿಟರ್ಸ್‌ ಚಿತ್ರ   

ಬೀಜಿಂಗ್‌: ಇಥಿಯೋಪಿಯಾದ ಬೋಯಿಂಗ್‌ 737 ಮ್ಯಾಕ್ಸ್‌ ವಿಮಾನ ಪತನಗೊಂಡ ನಂತರ, ಇಂತಹ ವಿಮಾನಗಳ ಸುರಕ್ಷತೆ ಬಗ್ಗೆ ಹಲವು ದೇಶಗಳು ಧ್ವನಿ ಎತ್ತಿವೆ. ಚೀನಾದ ನಾಗರಿಕ ವಿಮಾನಯಾನ ಪ್ರಾಧಿಕಾರವು ಸೋಮವಾರ ಈ ಕುರಿತು ಆದೇಶ ನೀಡಿದ್ದು, 100 ಬೊಯಿಂಗ್‌ 737 ಮ್ಯಾಕ್ಸ್‌ 8 ವಿಮಾನಗಳು ಎಷ್ಟು ಸುರಕ್ಷಿತ ಎಂಬ ಬಗ್ಗೆ ವರದಿ ನೀಡಲು ಸೂಚಿಸಿದೆ.

ಇಂಡೋನೇಷ್ಯಾ ಮತ್ತು ಇಥಿಯೋಪಿಯಾ ಕೂಡ, ಈ ವಿಮಾನಗಳಲ್ಲಿನ ಸುರಕ್ಷತಾ ಸೌಲಭ್ಯಗಳ ಕುರಿತು ವರದಿ ನೀಡಲು ಆದೇಶಿಸಿವೆ.

ಚೀನಾ ಸರ್ಕಾರ ದೇಶದ ವಿಮಾನಯಾನ ಸಂಸ್ಥೆಗಳಿಗೆಬಿ–737–8 ಮ್ಯಾಕ್ಸ್‌ ವಿಮಾನಗಳ ಹಾರಾಟ ಸ್ಥಗಿತಗೊಳಿಸುವಂತೆ ಸೂಚನೆ ನೀಡಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇಂಡೋನೇಷ್ಯಾದ ಲಯನ್‌ ಏರ್‌ ಸಂಸ್ಥೆಯ ಬಿ–737 ಮ್ಯಾಕ್ಸ್‌ ವಿಮಾನವು ಪತನಗೊಂಡಿತ್ತು. ಜಕಾರ್ತಾದಿಂದ ಹೊರಟಿದ್ದ ವಿಮಾನವು ಪತನಗೊಂಡು‍‍ಪ್ರಯಾಣಿಸುತ್ತಿದ್ದ ಎಲ್ಲ 189 ಜನರೂ ಸಾವಿಗೀಡಾದರು.

ADVERTISEMENT

ಇಥೋಪಿಯನ್‌ ಏರ್‌ಲೈನ್ಸ್‌ ‘ಬೋಯಿಂಗ್‌ 737 ಮ್ಯಾಕ್ಸ್‌ 8’ ವಿಮಾನಗಳ ಹಾರಾಟವನ್ನು ಸ್ಥಗಿತ ಪಡಿಸಿರುವುದಾಗಿ ಸೋಮವಾರ ಹೇಳಿದೆ. ಮುಂದಿನ ಸೂಚನೆಯವರೆಗೂ ವಿಮಾನಗಳು ಹಾರಾಟ ನಡೆಸುವುದಿಲ್ಲ ಎಂದಿದೆ.

ಈವರೆಗೆ ಬೋಯಿಂಗ್‌ ಸಂಸ್ಥೆ 350ಕ್ಕೂ ಹೆಚ್ಚು ಬಿ–737 ಮ್ಯಾಕ್ಸ್‌ ವಿಮಾನಗಳನ್ನು ಹಲವು ರಾಷ್ಟ್ರಗಳ ವಿಮಾನಯಾನ ಸಂಸ್ಥೆಗಳಿಗೆ ಮಾರಾಟ ಮಾಡಿದೆ.

ಕಪ್ಪು ಪೆಟ್ಟಿಗೆ ಪತ್ತೆ
ಆಡಿಸ್‌ ಅಬಾಬಾ (ಎಎಫ್‌ಪಿ): ಇಲ್ಲಿ ಭಾನುವಾರ ಬೆಳಿಗ್ಗೆ ಪತನವಾಗಿದ್ದ ಇಥಿಯೋಪಿಯಾದ ವಿಮಾನ ‘ಬೋಯಿಂಗ್‌–737’ನ ಕಪ್ಪು ಪೆಟ್ಟಿಗೆ (ಬ್ಲ್ಯಾಕ್‌ ಬಾಕ್ಸ್‌) ಪತ್ತೆಯಾಗಿದೆ.

ಇಥಿಯೋಪಿಯಾದ ಆಡಿಸ್‌ ಅಬಾಬಾದಿಂದ ಕೀನ್ಯಾದ ನೈರೋಬಿಗೆ ಹೊರಟಿದ್ದ ಈ ವಿಮಾನ ಪತನಗೊಂಡು, ನಾಲ್ವರುಭಾರತೀಯರುಸೇರಿ 157 ಮಂದಿ ಮೃತಪಟ್ಟಿದ್ದರು. ಈ ಪೈಕಿ ವಿಶ್ವಸಂಸ್ಥೆಯ 22 ನೌಕರರೂ ಇದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಬ್ಲ್ಯಾಕ್‌ಬಾಕ್ಸ್‌ ಅನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.