ADVERTISEMENT

ಆಟ ಸಮೀಕ್ಷೆ| ಪರಿಸರದ ಆಟ, ಸೃಜನಶೀಲತೆಗೆ ಪಾಠ

ಪಿಟಿಐ
Published 17 ಫೆಬ್ರುವರಿ 2020, 14:50 IST
Last Updated 17 ಫೆಬ್ರುವರಿ 2020, 14:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಲ್ಬರ್ನ್‌: ಪಾಲಕರ ಮೇಲಿನ ಅವಲಂಬನೆಯಿಲ್ಲದೆ ಮಕ್ಕಳು ಹೊರಗಿನ ವಾತಾವರಣದಲ್ಲಿ ಆಡುವ ಅವಕಾಶ ಪಡೆದರೆ ಅವರಲ್ಲಿ ಯೋಚನಾ ಸಾಮರ್ಥ್ಯ ಬೆಳೆಯುವುದಲ್ಲದೆ ಸಾಮಾಜಿಕ ಕೌಶಲ ಹಾಗೂ ಸೃಜನಶೀಲತೆ ಹೆಚ್ಚಾಗಿ ಮೈಗೂಡುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ.

ಮುಕ್ತ ಪರಿಸರದಲ್ಲಿಮಕ್ಕಳು ಆಡಿದರೆ ಅವರ ಆರೋಗ್ಯ ಮತ್ತು ಬೆಳವಣಿಗೆಯಲ್ಲಿ ಆಗುವ ಬದಲಾವಣೆಗಳ ಕುರಿತು ಪ್ಲೋಸ್‌ ಒನ್‌ ಸಂಸ್ಥೆ ಈ ಸಮೀಕ್ಷೆಯನ್ನು ನಡೆಸಿದೆ. ಸಮೀಕ್ಷೆಯು ಹೊರಹಾಕಿದ ಮಾಹಿತಿಯು ಶಾಲೆಗಳಲ್ಲಿ ಆಟಕ್ಕೆ ಸಿಗಬೇಕಾದ ಮಹತ್ವದ ಕಡೆಗೆ ಬೊಟ್ಟು ಮಾಡಿದೆ.

ಎರಡರಿಂದ 12 ವರ್ಷದೊಳಗಿನ ಮಕ್ಕಳನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು. ಮುಕ್ತ ವಾತಾವರಣದಲ್ಲಿ ಆಡಿದ ಮಕ್ಕಳ ಯೋಚನಾ ಸಾಮರ್ಥ್ಯ, ಸಾಮಾಜಿಕ ಕೌಶಲ ಮತ್ತು ಸೃಜನಶೀಲತೆ ಹೆಚ್ಚು ವಿಕಾಸ ಹೊಂದಿರುವುದು ಕಂಡುಬಂತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

‘ಪರಿಸರದಲ್ಲಿ ಮುಕ್ತವಾಗಿ ಆಡುವುದು ಎಂದರೆ ಮಣ್ಣಿನ ಆಕೃತಿಗಳನ್ನು ಮಾಡುವುದು, ಕಟ್ಟಿಗೆ ತುಂಡುಗಳಿಂದ ಕೋಟೆಗಳನ್ನು ಕಟ್ಟುವುದು, ಗುಡ್ಡ ಏರುವ ಸಾಹಸ ಮಾಡುವುದು, ಆಡುವ ಭರದಲ್ಲಿ ಬಟ್ಟೆಗಳನ್ನು ಕೊಳೆ ಮಾಡಿಕೊಳ್ಳುವುದು. ಇಂತಹ ಆಟವೇ ಮಕ್ಕಳಿಗೆ ಹೆಚ್ಚಿನ ಮೋಜು ಕೊಡುತ್ತವೆ’ ಎಂದು ಹೇಳುತ್ತಾರೆ ಸಮೀಕ್ಷಾ ವರದಿ ಸಿದ್ಧಪಡಿಸಿದ ಸೌತ್‌ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದ ಕೈಲಿ ಡಾನ್‌ಕಿವ್‌.

‘ಮುಕ್ತವಾಗಿ ಆಡಲು ಬಿಟ್ಟ ಮಕ್ಕಳ ಏಕಾಗ್ರತೆ ಹೆಚ್ಚಿದೆ. ಸಮಯಪಾಲನೆಯಲ್ಲೂ ಅವರು ಮುಂದೆ ಇದ್ದಾರೆ. ತರಗತಿಯಲ್ಲಿ ಶಿಕ್ಷಕರು ಹೇಳುವ ಪಾಠಗಳನ್ನು ಅವರಿಂದ ಸರಿಯಾಗಿ ಗ್ರಹಿಸಲು ಸಾಧ್ಯವಾಗಿದೆ. ಹೀಗಾಗಿ ಹಲವು ಶಾಲೆಗಳಲ್ಲಿ ಈಗ ಪರಿಸರದ ಆಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ. ಗಿಡ, ಮರಗಳನ್ನು, ಕಲ್ಲು–ಬೆಟ್ಟಗಳನ್ನು ಆಟಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ’ ಎಂದು ಅವರು ವಿವರಿಸುತ್ತಾರೆ.

ಮಕ್ಕಳ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ತಜ್ಞರು, ವೈದ್ಯರು, ನೀತಿ ನಿರೂಪಕರು, ಆಟದ ಸಲಕರಣೆಗಳ ವಿನ್ಯಾಸಕಾರರಿಗೆ ಈ ಸಮೀಕ್ಷೆ ನೆರವಿಗೆ ಬರಲಿದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.