ADVERTISEMENT

ಪ್ರಧಾನಿ ಮೋದಿಗೆ ಪಪುವಾ ನ್ಯೂಗಿನಿಯ ಅತ್ಯುನ್ನತ ನಾಗರಿಕ ಪುರಸ್ಕಾರ

‘ಗ್ರಾಂಡ್‌ ಚಾಂಪಿಯನ್‌ ಆಫ್‌ ದಿ ಆರ್ಡರ್‌ ಆಫ್‌ ಲೊಗೊಹು (ಜಿಸಿಎಲ್‌)’

ಪಿಟಿಐ
Published 22 ಮೇ 2023, 14:06 IST
Last Updated 22 ಮೇ 2023, 14:06 IST
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಪಪುವಾ ನ್ಯೂಗಿನಿ ಮತ್ತು ಫಿಜಿ ದೇಶಗಳ ಅತ್ಯುನ್ನತ ನಾಗರಿಕ ಪುರಸ್ಕಾರ ‘ಗ್ರಾಂಡ್‌ ಚಾಂಪಿಯನ್‌ ಆಫ್‌ ದಿ ಆರ್ಡರ್‌ ಆಫ್‌ ಲೊಗೊಹು (ಜಿಸಿಎಲ್‌)’ ನೀಡಿ ಗೌರವಿಸಲಾಯಿತು –ಐಎಎನ್‌ಎಸ್‌ ಚಿತ್ರ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಪಪುವಾ ನ್ಯೂಗಿನಿ ಮತ್ತು ಫಿಜಿ ದೇಶಗಳ ಅತ್ಯುನ್ನತ ನಾಗರಿಕ ಪುರಸ್ಕಾರ ‘ಗ್ರಾಂಡ್‌ ಚಾಂಪಿಯನ್‌ ಆಫ್‌ ದಿ ಆರ್ಡರ್‌ ಆಫ್‌ ಲೊಗೊಹು (ಜಿಸಿಎಲ್‌)’ ನೀಡಿ ಗೌರವಿಸಲಾಯಿತು –ಐಎಎನ್‌ಎಸ್‌ ಚಿತ್ರ   

ಪೋರ್ಟ್‌ ಮೊರೆಸ್ಬಿ: ಭಾರತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಪುವಾ ನ್ಯೂಗಿನಿ ಮತ್ತು ಫಿಜಿ ದೇಶಗಳ ಅತ್ಯುನ್ನತ ನಾಗರಿಕ ಪುರಸ್ಕಾರವನ್ನು ಸೋಮವಾರ ನೀಡಿ ಗೌರವಿಸಲಾಯಿತು. 

‘ಸರ್ಕಾರಿ ಭವನದಲ್ಲಿ ಏರ್ಪಡಿಸಿದ್ದ ವಿಶೇಷ ಸಮಾರಂಭದಲ್ಲಿ ಪಪುವಾ ನ್ಯೂಗಿನಿ ಗವರ್ನರ್‌ ಜನರಲ್‌ ಸರ್‌ ಬಾಬ್‌ ದಾಡೇ ಅವರು ನರೇಂದ್ರ ಮೋದಿ ಅವರಿಗೆ ‘ಗ್ರಾಂಡ್‌ ಚಾಂಪಿಯನ್‌ ಆಫ್‌ ದಿ ಆರ್ಡರ್‌ ಆಫ್‌ ಲೊಗೊಹು (ಜಿಸಿಎಲ್‌)’ ಪುರಸ್ಕಾರ ನೀಡಿ ಗೌರವಿಸಿದರು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಇದು ಅಲ್ಲಿಯ ಅತ್ಯುನ್ನತ ನಾಗರಿಕ ಪುರಸ್ಕಾರ ಮತ್ತು ಈ ಪುರಸ್ಕಾರ ಪಡೆದವರನ್ನು ‘ಚೀಫ್‌’ ಎಂದು ಕರೆಯಲಾಗುವುದು ಎಂದು ಸಚಿವಾಲಯ ತಿಳಿಸಿದೆ.  

ADVERTISEMENT

ಭಾರತ– ಪೆಸಿಫಿಕ್‌ ದ್ವೀಪ ರಾಷ್ಟ್ರಗಳ ಸಹಕಾರ ವೇದಿಕೆಯ (ಎಫ್‌ಐಪಿಐಸಿ) ಮೂರನೇ ಸಮ್ಮೇಳನದಲ್ಲಿ ಭಾಗಿಯಾಗುವ ಸಲುವಾಗಿ ಮೋದಿ ಅವರು ಭಾನುವಾರ ಪಪುವಾ ನ್ಯೂಗಿನಿಗೆ ತೆರಳಿದ್ದರು. 

ಆಸ್ಟ್ರೇಲಿಯಾ ತಲುಪಿದ ಮೋದಿ  ಸಿಡ್ನಿ

ಆರು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಆಸ್ಟ್ರೇಲಿಯಾ ತಲುಪಿದರು. ಅಲ್ಲಿಯ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಅವರ ಜೊತೆ ಮೋದಿ ಮಾತುಕತೆ ನಡೆಸಲಿದ್ದಾರೆ.  ಬಳಿಕ ಭಾರತೀಯ ಸಮುದಾಯ ಏರ್ಪಡಿಸಿರುವ ಕಾರ್ಯಕ್ರಮವೊಂದರಲ್ಲಿ ಮೋದಿ ಅವರು ಭಾಗವಹಿಸಲಿದ್ದಾರೆ. ಈ ಕುರಿತು ಮೋದಿ ಅವರು ಟ್ವೀಟ್‌ ಮಾಡಿದ್ದಾರೆ. ‘ಸಿಡ್ನಿಗೆ ಬಂದಿಳಿದೆ. ಇಲ್ಲಿಯ ಭಾರತೀಯ ಸಮುದಾಯವು ಆಪ್ತವಾಗಿ ಸ್ವಾಗತಿಸಿತು. ಮುಂದಿನ ಎರಡು ದಿನಗಳು ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದನ್ನು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.  ‘ಕಳೆದ ವರ್ಷ ಭಾರತಕ್ಕೆ ಭೇಟಿ ನೀಡಿ ಆತ್ಮೀಯ ಸ್ವಾಗತ ಸ್ವೀಕರಿಸಿದ್ದೆ. ಈಗ ಅಧಿಕೃತ ಪ್ರವಾಸದ ಕಾರಣ ಆಸ್ಟ್ರೇಲಿಯಾಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಆತಿಥ್ಯ ನೀಡಲು ಸಂತಸವಾಗುತ್ತಿದೆ’ ಎಂದು ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಅವರು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.