ADVERTISEMENT

ಭಾರತದಲ್ಲಿ ಹೂಡಿಕೆ ಮಾಡಿ: ಮೋದಿ ಆಹ್ವಾನ

ಜರ್ಮನಿಯಲ್ಲಿ ಉದ್ಯಮಿಗಳೊಂದಿಗೆ ಪ್ರಧಾನಿ ಸಂವಾದ

ಪಿಟಿಐ
Published 2 ಮೇ 2022, 19:02 IST
Last Updated 2 ಮೇ 2022, 19:02 IST
ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಸ್ತಲಾಘವ ಮಾಡಿದರು– ಪಿಟಿಐ ಚಿತ್ರ
ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹಸ್ತಲಾಘವ ಮಾಡಿದರು– ಪಿಟಿಐ ಚಿತ್ರ   

ಬರ್ಲಿನ್: ಜರ್ಮನ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಜೆಪಿ ಸರ್ಕಾರವು ಕೈಗೊಂಡ ಸುಧಾರಣೆಗಳನ್ನು ವಿವರಿಸಿ, ಭಾರತದ ಯುವಜನರನ್ನು ಕೇಂದ್ರೀಕರಿಸಿ ಬಂಡವಾಳ ಹೂಡುವಂತೆ ಅಲ್ಲಿನ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ.

ಭಾರತ ಮತ್ತು ಜರ್ಮನಿಯ ಉದ್ಯಮಿಗಳೊಂದಿಗೆ ಸಂವಾದ ನಡೆಸಿದ ಅವರು, ‘ಭಾರತದಲ್ಲಿ ಹೆಚ್ಚುತ್ತಿರುವ ನವೋದ್ಯಮಗಳು (ಸ್ಟಾರ್ಟ್‌ ಅಪ್‌ಗಳು) ಮತ್ತು ಯೂನಿಕಾರ್ನ್‌ಗಳ ಬಗ್ಗೆ ವಿವರಿಸಿದರು. ಈ ದಿಸೆಯಲ್ಲಿ ಭಾರತದ ಯುವಜನರನ್ನು ಕೇಂದ್ರೀಕರಿಸಿಕೊಂಡು ಉದ್ಯಮಿಗಳು ಬಂಡವಾಳ ಹೂಡಬೇಕೆಂದು ಆಹ್ವಾನ ನೀಡಿದರು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

‘ಇಂಡೋ–ಜರ್ಮನ್‌ನ ನಡುವಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ಜತೆಗೆ ಆರ್ಥಿಕ ಮತ್ತು ವಾಣಿಜ್ಯ ಪಾಲುದಾರಿಕೆಯನ್ನು ವೃದ್ಧಿಸುವ ಬಗ್ಗೆಯೂ ಪ್ರಧಾನಿ ಅವರು ಚರ್ಚಿಸಿದರು’ ಎಂದೂ ಸಚಿವಾಲಯವು ಟ್ವೀಟ್ ಮಾಡಿದೆ.

ADVERTISEMENT

ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ನೇತೃತ್ವದಲ್ಲಿ ನಡೆದ ವಾಣಿಜ್ಯ ಸಭೆಯಲ್ಲಿ ಮೋದಿ ಅವರು ಸಹ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಸರ್ಕಾರಗಳ ಉನ್ನತ ಪ್ರತಿನಿಧಿಗಳು ಮತ್ತು ಉಭಯ ದೇಶಗಳ ಆಯ್ದ ಸಿಇಒಗಳು ಸಭೆಯಲ್ಲಿ ಭಾಗವಹಿಸಿದ್ದರು.

ಭಾರತೀಯ ವ್ಯಾಪಾರದ ನಿಯೋಗವನ್ನು ಸಿಐಐನ ನಿಯೋಜಿತ ಅಧ್ಯಕ್ಷ ಹಾಗೂ ಮತ್ತು ಬಜಾಜ್ ಫಿನ್‌ಸರ್ವ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಬಜಾಜ್ ಅವರು ನೇತೃತ್ವ ವಹಿಸಿದ್ದರು. ಬಾಬಾ ಎನ್. ಕಲ್ಯಾಣಿ, ಸಿ.ಕೆ. ಬಿರ್ಲಾ, ಪುನೀತ್ ಛತ್ವಾಲ್, ಸಲಿಲ್ ಸಿಂಘಾಲ್, ಸುಮಂತ್ ಸಿನ್ಹಾ, ದಿನೇಶ್ ಖರಾ, ಸಿ ಪಿ. ಗುರ್ನಾನಿ ಮತ್ತು ದೀಪಕ್ ಬಾಗ್ಲಾ ಭಾರತೀಯ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.