ನರೇಂದ್ರ ಮೋದಿ
ಪಿಟಿಐ ಚಿತ್ರ
ಕನನಾಸ್ಕಿಸ್ (ಕೆನಡಾ): ಪ್ರಧಾನಿ ನರೇಂದ್ರ ಮೋದಿ ಅವರು ಕೆನಾಡದಲ್ಲಿ ಜಿ7 ಶೃಂಗಸಭೆ ಮತ್ತು ಪ್ರಧಾನಿ ಕಾರ್ನಿ ಜೊತೆ ಉತ್ಪಾದಕ ಮಾತುಕತೆ ಬಳಿಕ ತಮ್ಮ ಮೂರು ರಾಷ್ಟ್ರಗಳ ಪ್ರವಾಸದ ಮೂರನೇ ಮತ್ತು ಕೊನೆಯ ದೇಶ ಕ್ರೊಯೇಷಿಯಾಗೆ ತೆರಳಿದ್ದಾರೆ.
ಕೆನಡಾ ಭೇಟಿಯನ್ನು ಮುಗಿಸಿದ್ದೇವೆ. ವೈವಿಧ್ಯಮಯ ಜಾಗತಿಕ ವಿಷಯಗಳ ಕುರಿತು ಫಲಪ್ರದ ಚರ್ಚೆಗಳಿಗೆ ಸಾಕ್ಷಿಯಾದ ಯಶಸ್ವಿ ಜಿ7 ಶೃಂಗಸಭೆಯನ್ನು ಆಯೋಜಿಸಿದ್ದಕ್ಕಾಗಿ ಕೆನಡಾದ ಜನರು ಮತ್ತು ಸರ್ಕಾರಕ್ಕೆ ಧನ್ಯವಾದಗಳು. ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಸುಸ್ಥಿರತೆಯನ್ನು ಮತ್ತಷ್ಟು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ ಎಂದು ಅವರು ಮಂಗಳವಾರ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಕನನಾಸ್ಕಿಸ್‌ನಲ್ಲಿ, ಪ್ರಧಾನಿ ಮೋದಿ ಏಳು ರಾಷ್ಟ್ರಗಳ ನಾಯಕರೊಂದಿಗೆ ಪ್ರಮುಖ ಜಾಗತಿಕ ಸವಾಲುಗಳು ಮತ್ತು ಇತರ ವಿಷಯಗಳ ಕುರಿತು ಚ್ಚೆ ನಡೆಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿಯವರು, ಕೆನಡಾದ ಭೇಟಿಯನ್ನು ಮುಕ್ತಾಯಗೊಳಿಸಿದ್ದಾರೆ! ಜಿ7 ಶೃಂಗಸಭೆಯಲ್ಲಿ ಇಂಧನ ಭದ್ರತೆ, ತಂತ್ರಜ್ಞಾನ ಮತ್ತು ನಾವೀನ್ಯತೆ ಕುರಿತ ಪ್ರಮುಖ ವಿಷಯಗಳ ಕುರಿತು ಫಲಪ್ರದ ಮಾತುಕತೆಗಳನ್ನು ನಡೆಸಿದರು. ಹಲವು ನಾಯಕರನ್ನು ಭೇಟಿಯಾಗಿ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದರು’ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಮೋದಿ ಇಲ್ಲಿ ವಿಶ್ವದ ಹಲವು ನಾಯಕರನ್ನು ಭೇಟಿಯಾಗಿ ವ್ಯಾಪಾರ ಮತ್ತು ಆರ್ಥಿಕತೆಯಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಕುರಿತು ಚರ್ಚಿಸಿದರು.
ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ-ಮ್ಯುಂಗ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್, ಇಟಾಲಿಯನ್ ಪ್ರಧಾನಿ ಜಾರ್ಜಿಯಾ ಮೆಲೋನಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿ ಮಾಡಿದ್ದಾರೆ.
ಎರಡೂ ದೇಶಗಳಲ್ಲಿನ ನಾಗರಿಕರು ಮತ್ತು ಉದ್ಯಮಗಳಿಗೆ ಸಂಬಂಧಿಸಿದ ನಿಯಮಿತ ಸೇವೆಗಳಿಗೆ ಮರಳುವ ಉದ್ದೇಶದಿಂದ ಹೊಸ ಹೈಕಮಿಷನರ್‌ಗಳನ್ನು ನೇಮಿಸಲು ಭಾರತ ಮತ್ತು ಕೆನಡಾ ಒಪ್ಪಿಕೊಂಡಿವೆ. ಈ ಮೂಲಕ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಣೆ ಕಂಡಿದೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.