ADVERTISEMENT

ನೂತನ, ಭವ್ಯ ಅಧ್ಯಾಯ ಆರಂಭ: ಪ್ರಧಾನಿ ಮೋದಿ

ಎರಡು ದಿನಗಳ ಮಾರಿಷಸ್ ಭೇಟಿ

ಪಿಟಿಐ
Published 11 ಮಾರ್ಚ್ 2025, 23:56 IST
Last Updated 11 ಮಾರ್ಚ್ 2025, 23:56 IST
<div class="paragraphs"><p>ಪ್ರಧಾನಿ ಮೋದಿ ಅವರನ್ನು ಮಾರಿಷಸ್‌ನಲ್ಲಿರುವ ಭಾರತೀಯರು ಸ್ವಾಗತಿಸಿದರು </p></div>

ಪ್ರಧಾನಿ ಮೋದಿ ಅವರನ್ನು ಮಾರಿಷಸ್‌ನಲ್ಲಿರುವ ಭಾರತೀಯರು ಸ್ವಾಗತಿಸಿದರು

   

–ಪಿಟಿಐ ಚಿತ್ರ 

ಪೋರ್ಟ್‌ ಲೂಯಿಸ್‌: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಭೇಟಿಗಾಗಿ ಮಂಗಳವಾರ ಮಾರಿಷಸ್ ತಲುಪಿದರು. ವಿಮಾನ ನಿಲ್ದಾಣದಲ್ಲಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಬುಧವಾರ (ಮಾ. 12) ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮೋದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಭಾರತೀಯ ಯುದ್ಧ ನೌಕೆಯ ಜೊತೆಗೆ ವಾಯು ಪಡೆಯ ಸ್ಕೈಡೈವಿಂಗ್‌ನ ‘ಆಕಾಶ ಗಂಗಾ’ ತಂಡವು ಮಾರಿಷಸ್‌ನ ಸ್ವಾತಂತ್ರ್ಯದಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಮಾರಿಷಸ್‌ಗೆ ತೆರಳುವ ಮುನ್ನ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದ ಪ್ರಧಾನಿ, ‘ಎರಡೂ ದೇಶಗಳ ದ್ವಿಪಕ್ಷೀಯ ಸಂಬಂಧದಲ್ಲಿ ‘ನೂತನ ಮತ್ತು ಭವ್ಯ’ ಅಧ್ಯಾಯನವೊಂದು ತೆರೆದುಕೊಳ್ಳಲಿದೆ’ ಎಂದಿದ್ದರು.

ಕೌಶಲ ಅಭಿವೃದ್ಧಿ, ವ್ಯಾಪಾರ ಹಾಗೂ ಅಂತರರಾಷ್ಟ್ರೀಯ ಹಣಕಾಸು ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಹಲವಾರು ಒಪ್ಪಂದಗಳಿಗೆ ಎರಡೂ ದೇಶಗಳ ಪ್ರಮುಖರು ಸಹಿ ಹಾಕಲಿದ್ದಾರೆ ಎನ್ನಲಾಗಿದೆ.

ಭಾರತದ ಹಣಕಾಸಿನ ನೆರವಿನೊಂದಿಗೆ ಆರಂಭಿಸಿದ ಸುಮಾರು 20 ಯೋಜನೆಗಳಿಗೆ ಮೋದಿ ಅವರು ಚಾಲನೆ ನೀಡಲಿದ್ದಾರೆ. ಜೊತೆಗೆ, ನೂತನ ಮೂಲಸೌಕರ್ಯ ಯೋಜನೆಗಳನ್ನೂ ಘೋಷಿಸಲಿದ್ದಾರೆ. 

ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮಗೂಲಂ ಅವರೊಂದಿಗೆ ನಾಗರಿಕ ಸೇವಾ ಕಾಲೇಜು ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ವೇಳೆ ಪ್ರಧಾನಿ ಅವರು ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಾರಿಷಸ್‌ನ ಒಟ್ಟು 12 ಲಕ್ಷ ಜನಸಂಖ್ಯೆಯಲ್ಲಿ ಶೇ 70ರಷ್ಟು ಭಾರತೀಯರೇ ಇದ್ದಾರೆ.

ಭವ್ಯ ಸ್ವಾಗತ

ಸರ್‌ ಶಿವಸಾಗರ್ ರಾಮಗೂಲಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಮಾರಿಷಸ್ ಪ್ರಧಾನಿ ನವೀನ್‌ಚಂದ್ರ ರಾಮಗೂಲಂ ಸೇರಿದಂತೆ ಸುಮಾರು 200 ಗಣ್ಯರು ಸ್ವಾಗತ ಕೋರಿದರು. ವಿಮಾನ ನಿಲ್ದಾಣದಿಂದ ‘ಸರ್‌ ಶಿವಸಾಗರ್ ರಾಮಗೂಲಂ ಸಸ್ಯೋದ್ಯಾನ’ಕ್ಕೆ ತೆರಳಿದ ಇಬ್ಬರು ನಾಯಕರು ಮಾರಿಷಸ್‌ನ ಮೊದಲ ಪ್ರಧಾನಿ ಶಿವಸಾಗರ್ ರಾಮಗೂಲಂ ಹಾಗೂ ಮಾಜಿ ಪ್ರಧಾನಿ ಅನಿರುದ್ಧ್‌ ಜಗನ್ನಾಥ್ ಅವರ ಸಮಾಧಿಗೆ ಪುಪ್ಪ ನಮನ ಸಲ್ಲಿಸಿದರು. ಜೊತೆಗೆ ತಮ್ಮ ‘ಏಕ್‌ ಪೇಡ್‌ ಮಾ ಕೆ ನಾಮ್‌’ (ಅಮ್ಮನ ಹೆಸರಿನಲ್ಲಿ ಒಂದು ಮರ) ಅಭಿಯಾನದ ಭಾಗವಾಗಿ ಮೋದಿ ಅವರು ಒಂದು ಬೇಲದ ಸಸಿ ನೆಟ್ಟರು. ಬಳಿಕ ರಾಷ್ಟ್ರಪತಿ ಧರಮ್‌ ಗೋಕೂಲ್‌ ಅವರನ್ನು ಭೇಟಿ ಮಾಡಿ ಅವರಿಗೆ ಗಂಗಾಜಲ ಸೇರಿದಂತೆ ವಿವಿಧ ಉಡುಗೊರೆಗಳನ್ನು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.