ಪ್ರಧಾನಿ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಅವರು ಸೋಮವಾರ ನ್ಯೂಯಾರ್ಕ್‌ನಲ್ಲಿ ಭೇಟಿಯಾದರು
–ಪಿಟಿಐ ಚಿತ್ರ
ನ್ಯೂಯಾರ್ಕ್: ಅಮೆರಿಕದ ಮೂರು ದಿನಗಳ ಪ್ರವಾಸದ ಕೊನೆಯ ದಿನ ಸೋಮವಾರ ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರು ಭೇಟಿ ಮಾಡಿದರು. ಕಳೆದ ಮೂರು ತಿಂಗಳಲ್ಲಿ ಮೋದಿ ಹಾಗೂ ಝೆಲೆನ್‌ಸ್ಕಿ ಅವರ ಮೂರನೇ ಭೇಟಿ ಇದಾಗಿದೆ.
ಉಭಯ ನಾಯಕರು ಈ ಭೇಟಿ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಉಕ್ರೇನ್–ರಷ್ಯಾ ಯುದ್ಧವು ಅಂತ್ಯಗೊಂಡು, ಶಾಂತಿ ನೆಲಸಬೇಕು ಎಂಬ ನಿಲುವಿಗೆ ಇಂದಿಗೂ ನಾವು ಬದ್ಧರಾಗಿದ್ದೇವೆ. ಶಾಂತಿ ಸ್ಥಾಪನೆಗಾಗಿ ಭಾರತದ ಮಿತಿಯಲ್ಲಿ ಸಾಧ್ಯವಾಗುವ ಎಲ್ಲ ಸಹಕಾರವನ್ನೂ ನೀಡಲಾಗುವುದು’ ಎಂದು ಪ್ರಧಾನಿ ಮೋದಿ ಹೇಳಿದರು.
‘ಉಕ್ರೇನ್ ಕಡೆಯಿಂದಲೇ ಈ ಭೇಟಿ ಆಮಂತ್ರಣ ಬಂದಿತ್ತು’ ಎಂದು ಭಾರತ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದರು. ಇಬ್ಬರು ನಾಯಕರ ಭೇಟಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡ ಅವರು, ‘ಯುದ್ಧವನ್ನು ಅಂತ್ಯಗೊಳಿಸಬೇಕು ಎನ್ನುವ ಕುರಿತು ಪ್ರಧಾನಿ ಮೋದಿ ಅವರ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ಝೆಲೆನ್‌ಸ್ಕಿ ಹೇಳಿದರು. ಮಾತುಕತೆಯ ವೇಳೆ ಉಕ್ರೇನ್–ಭಾರತದ ದ್ವಿಪಕ್ಷೀಯ ಸಂಬಂಧದ ಕುರಿತೂ ಚರ್ಚಿಸಲಾಯಿತು’ ಎಂದು ತಿಳಿಸಿದರು.
ವಾಷಿಂಗ್ಟನ್: ಅಮೆರಿಕದಲ್ಲಿರುವ ಸಿಖ್ ಸಮುದಾಯದವರ ನಿಯೋಗವೊಂದು ಪ್ರಧಾನಿ ಮೋದಿ ಅವರನ್ನು ಸೋಮವಾರ ಭೇಟಿ ಮಾಡಿ ತಮ್ಮ ಸಮುದಾಯದ ಒಳಿತಿಗಾಗಿ ಭಾರತ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ‘ಸಿಖ್ ಫಾರ್ ಅಮೆರಿಕ’ ಸಂಘಟನೆಯ ಜಸ್‌ದೀಪ್ ಸಿಂಗ್ ಜಸ್ಸೀ ವಿಸ್‌ಕಾನ್ಸನ್ ಪ್ರಾಂತ್ಯದ ಸಿಖ್ ನಾಯಕ ದರ್ಶನ್ ಸಿಂಗ್ ಡಾಲೀವಾಲ್ ಹಾಗೂ ಇತರ ಪ್ರಮುಖರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ‘ಭಾರತದ ಇತಿಹಾಸದಲ್ಲಿಯೇ ಸಿಖ್ ಸಮುದಾಯಕ್ಕೆ ಪ್ರಧಾನಿ ಮೋದಿ ಅವರು ಮಾಡಿದಷ್ಟು ಉತ್ತಮ ಕೆಲಸಗಳನ್ನು ಬೇರೆ ಯಾವ ಪ್ರಧಾನಿಯೂ ಮಾಡಿಲ್ಲ. ಕೆಲವು ವಿಷಯಗಳನ್ನು ಮೋದಿ ಅವರೊಂದಿಗೆ ಚರ್ಚಿಸುವ ಸಲುವಾಗಿ ಶೀಘ್ರವೇ ಭಾರತಕ್ಕೆ ನಿಯೋಗವೊಂದು ತೆರಳಲಿದೆ’ ಎಂದು ಜಸದೀಪ್ ಸಿಂಗ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.