ಟ್ರಿನಿಡಾಡ್ ಪ್ರಧಾನಿ ಏರ್ಪಡಿಸಿದ್ದ ಭೋಜನಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ ಎಕ್ಸ್ ಖಾತೆಯ ಚಿತ್ರ
ಪೋರ್ಟ್ ಆಫ್ ಸ್ಪೇನ್: ಐದು ದೇಶಗಳ ಪ್ರವಾಸದ ಭಾಗವಾಗಿ ಘಾನಾ ಪ್ರವಾಸ ಮುಗಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಟ್ರಿನಿಡಾಡ್ ಮತ್ತು ಟೊಬ್ಯಾಗೊಗೆ ಆಗಮಿಸಿದ್ದಾರೆ. ಮೋದಿ ಅವರನ್ನು ಪ್ರಧಾನಿ ಕಮಲಾ ಪ್ರಸಾದ್ ಬಿಸ್ವೇಸ್ವರ್ ಪಿಯಾರ್ಕೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಮೋದಿಗೆ ಗಾರ್ಡ್ ಆಫ್ ಹಾನರ್ ಗೌರವ ನೀಡಲಾಯಿತು. ಈ ಸಂದರ್ಭ ಕ್ಯಾಬಿನೆಟ್ ಸಚಿವರು ಮತ್ತು ಸೆಮೆಟರ್‌ಗಳು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮೋದಿಗೆ ಸ್ವಾಗತ ಕೋರಲಾಯಿತು. ಭಾರತದ ಪೌರಾಣಿಕ ಪಾತ್ರಗಳ ವೇಷ ಧರಿಸಿದ್ದ ಭಾರತೀಯ ಸಮುದಾಯದ ಜನರನ್ನು ಮೋದಿ ಭೇಟಿಯಾದರು.
'ಟ್ರಿನಿಡಾಡ್ ಮತ್ತು ಟೊಬಾಗೊದ ಪೋರ್ಟ್ ಆಫ್ ಸ್ಪೇನ್‌ನಲ್ಲಿ ಬಂದಿಳಿದೆ. ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ವಾಗತಿಸಿದ ಗೌರವಾನ್ವಿತ ಪ್ರಧಾನಿ ಕಮಲಾ ಪ್ರಸಾದ್-ಬಿಸ್ಸೆಸ್ಸರ್, ಸಚಿವ ಸಂಪುಟದ ಗೌರವಾನ್ವಿತ ಸದಸ್ಯರು ಮತ್ತು ಸಂಸದರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ'ಎಂದು ಮೋದಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಈ ಭೇಟಿ ನಮ್ಮ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಕೆಲವು ಗಂಟೆಗಳಲ್ಲಿ ಸಮುದಾಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲು ಎದುರು ನೋಡುತ್ತಿದ್ದೇನೆ’ಎಂದು ಅವರು ಹೇಳಿದ್ದಾರೆ.
ಟ್ರಿನಿಡಾಡ್‌ಗೆ ಇದು ಪ್ರಧಾನಿಯಾಗಿ ಮೋದಿ ಅವರ ಮೊದಲ ಭೇಟಿಯಾಗಿದ್ದು, 1999 ರಿಂದ ಟ್ರಿನಿಡಾಡ್ ಮತ್ತು ಟೊಬಾಗೊಗೆ ಪ್ರಧಾನ ಮಂತ್ರಿ ಮಟ್ಟದಲ್ಲಿ ಮೊದಲ ದ್ವಿಪಕ್ಷೀಯ ಭೇಟಿಯಾಗಿದೆ.
‘ಭಾರತ ಮತ್ತು ಟ್ರಿನಿಡಾಡ್ ಮತ್ತು ಟೊಬಾಗೊ ನಡುವಿನ ಸ್ನೇಹವು ಮುಂದಿನ ದಿನಗಳಲ್ಲಿ ಹೊಸ ಎತ್ತರವನ್ನು ತಲುಪಲಿ!’ಅವರು ಮತ್ತೊಂದು ಪೋಸ್ಟ್‌ನಲ್ಲಿ ತಮ್ಮ ಸ್ವಾಗತದ ಚಿತ್ರಗಳನ್ನು ಹಂಚಿಕೊಂಡು ತಿಳಿಸಿದ್ದಾರೆ.
ಹೋಟೆಲ್‌ಗೆ ಆಗಮಿಸಿದ ಅವರನ್ನು ಭಾರತೀಯ ಸಮುದಾಯವು, ಭಾರತ್ ಮಾತಾ ಕಿ ಜೈ ಮತ್ತು 'ಮೋದಿ, ಮೋದಿ ಘೋಷಣೆಗಳೊಂದಿಗೆ ಸ್ವಾಗತಿಸಿತು. ಇನ್ನೊಂದು ಗುಂಪು ಸಾಂಪ್ರದಾಯಿಕ ಭೋಜ್‌ಪುರಿ ಚೌತಾಲ್ ಸಂಗೀತವನ್ನು ನುಡಿಸಿತು.
'ಭಾರತದಿಂದ ಹಲವು ವರ್ಷಗಳ ಹಿಂದೆ ಟ್ರಿನಿಡಾಡ್ ಮತ್ತು ಟೊಬೆಗೊಗೆ ಬಂದಿರುವ ಭಾರತೀಯರು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು, ಈ ದೇಶದ ಅಭಿವೃದ್ಧಿ ಪ್ರಯಾಣವನ್ನು ಶ್ರೀಮಂತಗೊಳಿಸುತ್ತಿದ್ದಾರೆ. ಅದೇ ಸಮಯದಲ್ಲಿ, ಅವರು ಭಾರತದೊಂದಿಗೆ ಸಂಪರ್ಕವನ್ನು ಉಳಿಸಿಕೊಂಡಿದ್ದಾರೆ. ಭಾರತೀಯ ಸಂಸ್ಕೃತಿಯ ಬಗ್ಗೆಯೂ ಉತ್ಸುಕರಾಗಿದ್ದಾರೆ. ಪೋರ್ಟ್ ಆಫ್ ಸ್ಪೇನ್‌ನಲ್ಲಿ ಮರೆಯಲಾಗದ ಸ್ವಾಗತಕ್ಕಾಗಿ ಸ್ಥಳೀಯ ಭಾರತೀಯ ಸಮುದಾಯಕ್ಕೆ ಕೃತಜ್ಞರಾಗಿರುತ್ತೇನೆ’ಎಂದು ಪ್ರಧಾನಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.