ADVERTISEMENT

ಉಕ್ರೇನ್‌ ಬಿಕ್ಕಟ್ಟು: ನರೇಂದ್ರ ಮೋದಿ– ವಾಡ್ಲಿಮಿರ್ ಪುಟಿನ್ ಮಾತುಕತೆ

ಭಾರತದ ನಿಲುವು ಪುನರುಚ್ಚಾರ; ಮಾತುಕತೆ–ರಾಜತಾಂತ್ರಿಕತೆಗೆ ಪ್ರಧಾನಿ ಒಲವು

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 12:38 IST
Last Updated 1 ಜುಲೈ 2022, 12:38 IST
ನರೇಂದ್ರ ಮೋದಿ ಹಾಗೂ ವಾಡ್ಲಿಮಿರ್ ಪುಟಿನ್
ನರೇಂದ್ರ ಮೋದಿ ಹಾಗೂ ವಾಡ್ಲಿಮಿರ್ ಪುಟಿನ್   

ನವದೆಹಲಿ: ಉಕ್ರೇನ್‌ ಬಿಕ್ಕಟ್ಟು ಶಮನಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಮತ್ತೊಂದು ಸುತ್ತಿನ ಮಹತ್ವದ ಮಾತುಕತೆ ನಡೆಸಿದ್ದಾರೆ.

ಪುಟಿನ್‌ ಜತೆಗಿನ ದೂರವಾಣಿ ಸಂಭಾಷಣೆಯ ವೇಳೆ ಮೋದಿ ಅವರು, ಉಕ್ರೇನ್‌ ವಿಚಾರದಲ್ಲಿ ಭಾರತ ಅನುಸರಿಸಿಕೊಂಡು ಬಂದಿರುವ ದೀರ್ಘಕಾಲದ ನಿಲುವನ್ನು ಪುನರುಚ್ಚರಿಸಿದರು. ಬಿಕ್ಕಟ್ಟು ಶಮನಕ್ಕೆ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒಲವು ತೋರಿದರು.

2021ರ ಡಿಸೆಂಬರ್‌ನಲ್ಲಿ ಪುಟಿನ್‌ ಅವರು ಭಾರತಕ್ಕೆ ಭೇಟಿ ನೀಡಿದಾಗ ತೆಗೆದುಕೊಳ್ಳಲಾಗಿದ್ದ ನಿರ್ಧಾರಗಳ ಅನುಷ್ಠಾನದ ಕುರಿತು ಇಬ್ಬರೂ ನಾಯಕರು ಚರ್ಚಿಸಿದರು ಎಂದು ಪ್ರಧಾನಿ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ನಿರ್ದಿಷ್ಟವಾಗಿ ಕೃಷಿ ಸರಕುಗಳು, ರಸಗೊಬ್ಬರ ಮತ್ತು ಔಷಧ ಉತ್ಪನ್ನಗಳಿಗೆ ಸಂಬಂಧಿಸಿ ದ್ವಿಪಕ್ಷೀಯ ವ್ಯಾಪಾರ ಉತ್ತೇಜಿಸಲು ಇಬ್ಬರೂ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.ಅಂತರರಾಷ್ಟ್ರೀಯ ಇಂಧನ ಮತ್ತುಆಹಾರ ಮಾರುಕಟ್ಟೆ ಸೇರಿದಂತೆಜಾಗತಿಕ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಿದರು.

ಜಾಗತಿಕ ಮತ್ತು ದ್ವಿಪಕ್ಷೀಯ ಸಮಸ್ಯೆಗಳ ಬಗ್ಗೆ ಸಮಾಲೋಚಿಸುವ ನಿಟ್ಟಿನಲ್ಲಿ ನಿರಂತರ ಸಂಪರ್ಕದಲ್ಲಿರಲು ಉಭಯ ನಾಯಕರು ಸಮ್ಮತಿಸಿದರು ಎಂದು ಪ್ರಧಾನಿ ಕಚೇರಿ ಹೇಳಿದೆ.

ಒಡೆಸಾ ಮೇಲೆ ಕ್ಷಿಪಣಿ ಸುರಿಮಳೆ: 19 ನಾಗರಿಕರ ಸಾವು

ಕೀವ್‌:ಉಕ್ರೇನಿನ ಒಡೆಸಾ ಬಂದರು ನಗರ ಸಮೀಪದ ಕರಾವಳಿಯ ಪಟ್ಟಣವೊಂದರ ವಸತಿ ಪ್ರದೇಶದ ಮೇಲೆ ಶುಕ್ರವಾರ ನಸುಕಿನಲ್ಲಿ ರಷ್ಯಾ ಪಡೆಗಳು ಕ್ಷಿಪಣಿಗಳ ಸುರಿಮಳೆ ಗರೆದಿದ್ದು, ಇಬ್ಬರು ಮಕ್ಕಳು ಸೇರಿ 19 ನಾಗರಿಕರು ಮೃತಪಟ್ಟಿದ್ದಾರೆ.

ಕಪ್ಪು ಸಮುದ್ರದ ಸ್ನೇಕ್‌ ಐಲೆಂಡ್‌ನಿಂದ ರಷ್ಯಾ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಮರು ದಿನವೇ, ಒಡೆಸಾದಿಂದ ಸುಮಾರು 50 ಕಿ.ಮೀ ದೂರದ ಕರಾವಳಿಯ ಸೆಹ್ರಿವ್ಕಾ ಪಟ್ಟಣದ ಬಹುಮಹಡಿಯ ವಸತಿ ಸಮುಚ್ಛಯಕ್ಕೆ ಮತ್ತು ರೆಸಾರ್ಟ್‌ ಪ್ರದೇಶಕ್ಕೆ ಕ್ಷಿಪಣಿಗಳು ಅಪ್ಪಳಿಸಿವೆ.9 ಮಹಡಿಗಳ ಅಪಾರ್ಟ್‌ಮೆಂಟ್ ಸಂಪೂರ್ಣ ನೆಲಸಮಗೊಂಡಿದೆ. ಕ್ಷಿಪಣಿಗಳ ಸ್ಫೋಟದ ರಭಸಕ್ಕೆ ಹತ್ತಿರದ 14 ಮಹಡಿಗಳ ಅಪಾರ್ಟ್‌ಮೆಂಟ್‌ ಸಮುಚ್ಛಯಕ್ಕೂ ಹಾನಿಯಾಗಿದೆ.

ಉಕ್ರೇನ್‌ ಅಧ್ಯಕ್ಷರ ಕಚೇರಿಯ ಉಪ ಮುಖ್ಯಸ್ಥ ಕಿರಿಲ್‌ ತೈಮೊಶೆಂಕೊ ಅವರು ಕ್ಷಿಪಣಿ ದಾಳಿಯಲ್ಲಿ ನಾಗರಿಕರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಘಟನೆಯಲ್ಲಿ 30 ಜನರು ಗಾಯಗೊಂಡಿದ್ದಾರೆ ಎಂದು ಒಡೆಸಾ ಪ್ರಾದೇಶಿಕ ಸರ್ಕಾರದ ವಕ್ತಾರ ಶೆರಿಹಿ ಬ್ರಾಚಕ್‌ ಟೆಲಿಗ್ರಾಮ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಉಕ್ರೇನ್‌ ಪೂರ್ವ ಭಾಗದ ಡಾನ್‌ಬಾಸ್‌ ಪ್ರದೇಶದ ನಿಯಂತ್ರಣಕ್ಕೆ ಕಾರ್ಯಾಚರಣೆ ಕೇಂದ್ರೀಕರಿಸಿರುವ ರಷ್ಯಾದ ಬಾಂಬ್‌ ದಾಳಿಗಳಿಗೆ ಇತ್ತೀಚಿನ ದಿನಗಳಲ್ಲಿ ನಾಗರಿಕರ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಸೋಮವಾರವಷ್ಟೇ ರಷ್ಯಾ ಪಡೆಗಳು ಉಕ್ರೇನ್‌ ಮಧ್ಯ ಭಾಗದ ಕ್ರೆಮೆನ್‌ಚುಕ್‌ ನಗರದ ಶಾಪಿಂಗ್‌ ಮೇಲೆ ನಡೆಸಿದ ಕ್ಷಿಪಣಿ ದಾಳಿಗೆ 19 ಜನರು ಮೃತಪಟ್ಟು, 62 ನಾಗರಿಕರು ಗಾಯಗೊಂಡಿದ್ದರು ಎಂದು ಉಕ್ರೇನ್‌ ತುರ್ತು ಸೇವೆ ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನಿನಲ್ಲಿ ನಡೆಸುತ್ತಿರುವ ವಿಶೇಷ ಸೇನಾ ಕಾರ್ಯಾಚರಣೆಯಲ್ಲಿ ನಾಗರಿಕರ ಹತ್ಯೆ ಮಾಡುತ್ತಿರುವುದನ್ನು ಪುಟಿನ್‌ ಆಡಳಿತ ಕಚೇರಿಯ ವಕ್ತಾರ ಡೆಮಿಟ್ರಿ ಪೆಸ್ಕೊವ್‌ ತಳ್ಳಿಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.