ಬ್ಯಾಂಕಾಕ್
(ರಾಯಿಟರ್ಸ್ ಚಿತ್ರ)
ಬ್ಯಾಂಕಾಕ್: ಥಾಯ್ಲೆಂಡ್ ಮತ್ತು ಮ್ಯಾನ್ಮಾರ್ ದೇಶಗಳಲ್ಲಿ ಶುಕ್ರವಾರ 7.7ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿದ್ದು, ಜನರನ್ನು ಬೆಚ್ಚಿಬೀಳಿಸಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಮ್ಯಾನ್ಮಾರ್‌ನಲ್ಲಿ ನೂರಾರು ಮಂದಿ ಮೃತ ಪಟ್ಟಿದ್ದಾರೆ. ಹಲವರು
ನಾಪತ್ತೆಯಾಗಿದ್ದಾರೆ.
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದ 30 ಮಹಡಿಯ ಸರ್ಕಾರಿ ಕಟ್ಟಡ ನೆಲಕ್ಕುರುಳಿದೆ. ಮ್ಯಾನ್ಮಾರ್ ಸರ್ಕಾರವು 6 ವಲಯಗಳಲ್ಲಿ ತುರ್ತುಸ್ಥಿತಿ ಘೋಷಿಸಿದೆ. ಮ್ಯಾನ್ಮಾರ್‌ನ 2ನೇ ಅತಿದೊಡ್ಡ ನಗರವಾಗಿರುವ ಮ್ಯಾಂಡಲೆ ಭೂಕಂಪದ ಕೇಂದ್ರಬಿಂದುವಾಗಿದೆ.
ಅಮೆರಿಕದ ಭೂವಿಜ್ಞಾನ ಕೇಂದ್ರದ ಪ್ರಕಾರ, ಕೇಂದ್ರ ಬಿಂದುವಿನಲ್ಲಿ ಸುಮಾರು 10 ಕಿ.ಮೀ ಆಳದಲ್ಲಿ ಭೂಕಂಪನವಾಗಿದೆ. ಅದರ ತೀವ್ರತೆಯು ಕೇಂದ್ರಬಿಂದುವಿನಿಂದ 10 ಕಿ.ಮೀ ಪರಿಧಿಯಲ್ಲಿ ವ್ಯಕ್ತವಾಗಿದೆ ಎಂದು ಅಂದಾಜು ಮಾಡಿದೆ.
ಮೊದಲಿಗೆ 7.7 ತೀವ್ರತೆಯ ಭೂಕಂಪನ ವಾಗಿದ್ದು, 11 ನಿಮಿಷದ ತರುವಾಯ ಮತ್ತೆ 6.4 ತೀವ್ರತೆಯ ಭೂಕಂಪ ಸಂಭವಿಸಿರುವುದು ದಾಖಲಾಗಿದೆ. 7.7 ತೀವ್ರತೆಯು ಹೆಚ್ಚು ಪ್ರಬಲವಾದುದು ಎಂದು ಕೇಂದ್ರವು ವಿಶ್ಲೇಷಿಸಿದೆ.
ಭೂಕಂಪದ ಅನುಭವವಾದಂತೆ ಬ್ಯಾಂಕಾಕ್ ನಗರದಲ್ಲಿ ಎಚ್ಚರಿಕೆ ಗಂಟೆಯನ್ನು ಮೊಳಗಿಸಲಾಯಿತು. ಬ್ಯಾಂಕಾಕ್‌ನ ಒಟ್ಟು ಜನಸಂಖ್ಯೆ 1.7 ಕೋಟಿಗೂ ಹೆಚ್ಚಿದ್ದು, ಹೆಚ್ಚಿನವರು ಬಹುಮಹಡಿ ವಸತಿ
ಸಂಕೀರ್ಣಗಳಲ್ಲಿಯೇ ವಾಸವಿದ್ದಾರೆ.
ಇತ್ತ, ಮ್ಯಾನ್ಮಾರ್‌ನಲ್ಲಿ ಸೇನಾ ಸರ್ಕಾರವು ರಾಜಧಾನಿ ನೈಪಿತಾವ್, ಮ್ಯಾಂಡಲೆ ಸೇರಿ ಆರು ವಲಯಗಳಲ್ಲಿ ತುರ್ತು ಸ್ಥಿತಿಯನ್ನು ಘೋಷಿಸಿದೆ. ನಾಗರಿಕ ಯುದ್ಧ ನಡೆದಿರುವ ದೇಶದಲ್ಲಿ ಹೇಗೆ ಬಾಧಿತ ಪ್ರದೇಶಗಳಿಗೆ ನೆರವಾಗಲಿದೆ ಎಂಬುದು ಸದ್ಯ ಸ್ಪಷ್ಟವಾಗಿಲ್ಲ.
‘ಭೂಕಂಪ ಬಾಧಿತ ಪ್ರದೇಶಗಳಲ್ಲಿ ವಿದ್ಯುತ್ ತಂತಿಗಳು ಕಡಿತಗೊಂಡಿವೆ. ಇದು ರಕ್ಷಣಾ ಕಾರ್ಯಗಳಿಗೆ ಸವಾಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಗಂಭೀರ ಸ್ವರೂಪದ ಪರಿಣಾಮ ಉಂಟಾಗಿದೆ’ ಎಂದು ರೆಡ್‌ಕ್ರಾಸ್ ಪ್ರತಿಕ್ರಿಯಿಸಿದೆ.
ಕಟ್ಟಡದಡಿ ಸಿಲುಕಿದ ಜನ:
ಬ್ಯಾಂಕಾಕ್‌ನಲ್ಲಿ ನಿರ್ಮಾಣಹಂತದಲ್ಲಿದ್ದ 30 ಮಹಡಿಯ ಗಗನಚುಂಬಿ ಕಟ್ಟಡ ನೆಲಕ್ಕುರುಳಿದೆ. ಹಿಂದೆಯೇ ದೊಡ್ಡ ಪ್ರಮಾಣದ ಹೊಗೆ ವಾತಾವರಣವನ್ನು ಆವರಿಸಿತು. ತಕ್ಷಣದ ಮಾಹಿತಿ ಪ್ರಕಾರ, ಒಬ್ಬ ಕಾರ್ಮಿಕ ಮೃತಪಟ್ಟಿದ್ದಾರೆ.
‘ಕಟ್ಟಡದ ಅವಶೇಷಗಳ ಕೆಳಗಿದ್ದ ಎರಡು ಲಾರಿಗಳು ತೀವ್ರ ಜಖಂಗೊಂಡಿವೆ. ಅವಶೇಷಗಳಡಿ ಹಲವರು ಸಿಲುಕಿದ್ದು, ರಕ್ಷಿಸುವ ಕಾರ್ಯಾಚರಣೆ ನಡೆದಿದೆ’ ಎಂದು ದೇಶದ ರಕ್ಷಣಾ ಸಚಿವರೂ ಆದ ಉಪಪ್ರಧಾನಿ ಫುಮ್‌ತಮ್ ವೆಚಾಯಾಚಿ ತಿಳಿಸಿದ್ದಾರೆ.
ಕಟ್ಟಡ ಕುಸಿದಂತೆಯೇ ವಾತಾವರಣ ವನ್ನು ದೊಡ್ಡಮಟ್ಟದ ಹೊಗೆ ಮತ್ತು ಬೂದಿ ಆವರಿಸಿತು. ಕಟ್ಟಡ ಕುಸಿಯುವ ಸೂಚನೆ ದೊರೆತಂತೆ ಆತಂಕಭರಿತ ಜನರು ದಿಕ್ಕಾಪಾಲಾಗಿ
ಓಡಿದ್ದಾರೆ.
ಉಳಿದಂತೆ, ಬ್ಯಾಕಾಂಕ್‌ನ ವಿವಿಧೆಡೆ ಜನರನ್ನು ಬಹುಮಹಡಿ ಕಟ್ಟಡಗಳಿಂದ ಹೊರಗೆ ಬರಲು ಸೂಚಿಸಿದ್ದು, ಆದಷ್ಟು ಹೊರಗೆ ಬಯಲು ಪ್ರದೇಶದಲ್ಲಿ ಇರಬೇಕು. ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.
ಬಾಂಗ್ಲಾದೇಶ, ಚೀನಾದಲ್ಲೂ ಕಂಪನ
ಢಾಕಾ/ಬೀಜಿಂಗ್: ಬಾಂಗ್ಲಾದೇಶ ಮತ್ತು ಚೀನಾದ ದಕ್ಷಿಣ ಭಾಗದಲ್ಲಿಯೂ ಭೂಕಂಪನದ ಅನುಭವವಾಗಿದೆ.
ಬಾಂಗ್ಲಾದೇಶದ ರಾಜಧಾನಿ ಢಾಕಾ ಮತ್ತು ಚಟ್ಟೋಗ್ರಾಮ್ ನಲ್ಲಿಯೂ ಭೂಕಂಪನದ ಅನುಭವವಾಗಿದೆ.
‘ಚೀನಾದಲ್ಲಿ ಯುನ್ನಾನ್ ಪ್ರಾಂತ್ಯದ ಕೆಲವೆಡೆ ಭೂಕಂಪದ ಅನುಭವವಾಗಿದೆ’ ಎಂದು ಸರ್ಕಾರದ ಮಾಧ್ಯಮ ತಿಳಿಸಿದೆ.
ಅಗತ್ಯ ನೆರವಿಗೆ ಮುಂದಾದ ವಿಶ್ವ ಆರೋಗ್ಯ ಸಂಸ್ಥೆ, ಇ.ಯು
* ಇದು ದೊಡ್ಡ ಪ್ರಮಾಣದ ಅವಘಡ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಹೇಳಿದೆ. ರಕ್ಷಣೆಗಾಗಿ ತುರ್ತು ನಿರ್ವಹಣಾ ವ್ಯವಸ್ಥೆ ಸಜ್ಜುಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.
* 27 ರಾಷ್ಟ್ರಗಳ ಸದಸ್ಯತ್ವವುಳ್ಳ ಯುರೋಪಿಯನ್ ಒಕ್ಕೂಟ (ಇಯು), ಭೂಕಂಪ ಬಾಧಿತ ಮ್ಯಾನ್ಮಾರ್ ಮತ್ತು ಥಾಯ್ಲೆಂಡ್‌ಗೆ ಎಲ್ಲ ಅಗತ್ಯ ನೆರವು ನೀಡಲು ಸಿದ್ಧ ಎಂದು ಭರವಸೆ ನೀಡಿದೆ.
* ಸದ್ಯ ಶಾಂಘೈ ಪ್ರವಾಸದಲ್ಲಿರುವ ಫ್ರಾನ್ ವಿದೇಶಾಂಗ ಸಚಿವ ಜೀನ್ ನೋಯೆಲ್ ಬಾರಟ್, ‘ಫ್ರಾನ್ಸ್‌ನ ರಾಯಭಾರ ಕಚೇರಿ, ಶಾಲೆ ಇತರೆ ಸಂಕೀರ್ಣಗಳನ್ನು ಉಲ್ಲೇಖಿಸಿ, ರಕ್ಷಣೆಗೆ ಅಗತ್ಯ ನೆರವು ನೀಡಲಾಗುವುದು’ ಎಂದಿದ್ದಾರೆ.
* ಮ್ಯಾನ್ಮಾರ್‌ನ ಸಗೇಂಗ್‌ನಲ್ಲಿ ಕುಸಿದ 90 ವರ್ಷ ಹಳೆಯ ಸೇತುವೆ. ಮ್ಯಾಂಡಲೆ ಮತ್ತು ಯಾಂಗೊನ್ ನಗರಗಳಿಗೆ ಇದು ಸಂಪರ್ಕ ಸೇತುವಾಗಿತ್ತು.
* ಮ್ಯಾನ್ಮಾರ್‌ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಹಲವು ವಿಮಾನಗಳ ಸಂಚಾರವನ್ನು ರದ್ದುಪಡಿಸಿತು.
ಅಗತ್ಯ ನೆರವು: ಪ್ರಧಾನಿ ಮೋದಿ ಅಭಯ
ನವದೆಹಲಿ: ಮ್ಯಾನ್ಮಾರ್, ಥಾಯ್ಲೆಂಡ್‌ನಲ್ಲಿ ತೀವ್ರ ಭೂಕಂಪ ಸಂಭವಿಸಿರುವುದಕ್ಕೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ರಕ್ಷಣಾ ಕಾರ್ಯಗಳಿಗೆ ಎಲ್ಲ ನೆರವು ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ. ಭೂಕಂಪದಿಂದ ಮೂಡಿರುವ ಪರಿಸ್ಥಿತಿ ಕುರಿತು ಆತಂಕವಿದೆ. ಎಲ್ಲ ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ಭಾರತ ಎಲ್ಲ ಅಗತ್ಯ ನೆರವು ಒದಗಿಸಲಿದೆ’ ಎಂದು ಮೋದಿ ‘ಎಕ್ಸ್’ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಭೂಕಂಪನದ ಪರಿಣಾಮ ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್ ಸೇರಿ ವಿವಿಧ ನಗರಗಳಲ್ಲಿ ಉಂಟಾಗಿದೆ. ಬ್ಯಾಂಕಾಕ್‌ನಲ್ಲಿ ಮುಂದಿನ ವಾರ ‘ಬಿಮ್‌ಸ್ಟೆಕ್’ ಸದಸ್ಯ ರಾಷ್ಟ್ರಗಳ ಶೃಂಗಸಭೆ ಮುಂದಿನ ವಾರ ನಡೆಯಬೇಕಿತ್ತು.
‘ಬಿಮ್‌ಸ್ಟೆಕ್’ ಪ್ರಾದೇಶಿಕ ಶೃಂಗದಲ್ಲಿ ಭಾರತ, ಥಾಯ್ಲೆಂಡ್ ಹೊರತುಪಡಿಸಿ ಶ್ರೀಲಂಕಾ, ಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ ಮತ್ತು ಭೂತಾನ್ ಸದಸ್ಯ ರಾಷ್ಟ್ರಗಳಾಗಿವೆ.
ಕೋಲ್ಕತ್ತ, ಇಂಫಾಲ್‌ನಲ್ಲಿ ಕಂಪನದ ಅನುಭವ
ಕೋಲ್ಕತ್ತ: ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿದ ಹಿಂದೆಯೇ, ದೇಶದ ಕೋಲ್ಕತ್ತ, ಇಂಫಾಲ್ ಮತ್ತು ಮೇಘಾಲಯದ ಪೂರ್ವ ಗಾರೊ ಜಿಲ್ಲೆಯ ಕೆಲವೆಡೆಯೂ ಭೂಕಂಪನದ ಅನುಭವವಾಗಿದೆ.
ಅಧಿಕೃತ ಮೂಲಗಳ ಪ್ರಕಾರ, ಎಲ್ಲಿಯೂ ಯಾವುದೇ ರೀತಿಯ ಹಾನಿ ಸಂಭವಿಸಿಲ್ಲ. ಮಣಿಪುರದಲ್ಲಿ ಹಳೆಯ ಕಟ್ಟಡಗಳು ಇರುವ ಥಾಂಗಲ್ ಬಜಾರ್ ವಲಯದಲ್ಲಿ ಭೂಕಂಪನದ ಅನುಭವವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.