ADVERTISEMENT

ಜಪಾನ್‌ನಲ್ಲಿ ಪ್ರಬಲ ಭೂಕಂಪ: ನಾಲ್ವರು ಸಾವು, ಸುನಾಮಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 2:51 IST
Last Updated 17 ಮಾರ್ಚ್ 2022, 2:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಟೊಕಿಯೊ: ಉತ್ತರ ಜಪಾನ್‌ನ ಫುಕುಶಿಮಾ ಕರಾವಳಿಯಲ್ಲಿ ಬುಧವಾರ ರಾತ್ರಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಘಟನೆಯಿಂದಾಗಿ ಹಲವು ನಗರಗಳಲ್ಲಿ ವಿದ್ಯುತ್ ವ್ಯವಸ್ಥೆ ಕಡಿತವಾಗಿದೆ, ನಾಲ್ವರು ಮೃತಪಟ್ಟಿದ್ದಾರೆ. 90ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಇದೇ ಪ್ರದೇಶದಲ್ಲಿ 11 ವರ್ಷಗಳ ಹಿಂದೆ 9.0 ತೀವ್ರತೆಯ ಭೂಕಂಪ ಸಂಭವಿಸಿತ್ತು. ಆಗ ಸೃಷ್ಟಿಯಾಗಿದ್ದ ಸುನಾಮಿಯಿಂದ ಭಾರಿ ಅನಾಹುತ ಸಂಭವಿಸಿತ್ತು. ಫುಕುಶಿಮಾ ಪರಮಾಣು ರಿಯಾಕ್ಟರ್‌ ತೀವ್ರವಾಗಿ ಹಾನಿಗೀಡಾಗಿ, ವಿಕಿರಣ ಸೋರಿಕೆಯಾಗಿತ್ತು.

ದೇಶದ ಈಶಾನ್ಯ ಮತ್ತು ಪೂರ್ವ ಭಾಗದಲ್ಲಿ, ವಿಶೇಷವಾಗಿ ಮಿಯಾಗಿ ಮತ್ತು ಫುಕುಶಿಮಾಗಳಲ್ಲಿ ಭೂಮಿ ಪ್ರಬಲವಾಗಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ADVERTISEMENT

ಉತ್ತರ ಅಕ್ಷಾಂಶ 37.7 ಮತ್ತು ಪೂರ್ವ ರೇಖಾಂಶ 141.7ರ 60 ಕಿಮೀ ಆಳದಲ್ಲಿ, ಬುಧವಾರ ಸ್ಥಳೀಯ ಕಾಲಮಾನ ರಾತ್ರಿ 11.36ರ ಸುಮಾರಿಗೆ ಕಂಪನ ಸಂಭವಿಸಿದೆ.

ಮಿಯಾಗಿ ಮತ್ತು ಫುಕುಶಿಮಾ ಪ್ರಾಂತ್ಯಗಳ ಕರಾವಳಿ ಪ್ರದೇಶಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ. 1 ಮೀಟರ್‌ನಷ್ಟು ಎತ್ತರದ ಅಲೆಗಳು ಅಪ್ಪಳಿಸುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದ್ದು, ತೀರ ಪ್ರದೇಶದಿಂದ ದೂರವಿರುವಂತೆ ಸೂಚಿಸಲಾಗಿದೆ.

ಭೂಕಂಪದಿಂದ ತೊಹೊಕು ಶಿಂಕನ್‌ಸೆನ್ ಬುಲೆಟ್ ರೈಲು ಹಳಿತಪ್ಪಿದ್ದು, ಆ ಮಾರ್ಗದಲ್ಲಿ ರೈಲುಗಳ ಓಡಾಟವನ್ನು ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.