ADVERTISEMENT

ಪಾಕಿಸ್ತಾನದಲ್ಲಿ ಮೈತ್ರಿ ಸರ್ಕಾರ: ಶೆಹಬಾಜ್‌ ಪ್ರಧಾನಿ, ಜರ್ದಾರಿ ಅಧ್ಯಕ್ಷ

ಪಿಟಿಐ
Published 21 ಫೆಬ್ರುವರಿ 2024, 14:52 IST
Last Updated 21 ಫೆಬ್ರುವರಿ 2024, 14:52 IST
ಶೆಹಬಾಜ್ ಷರೀಫ್
ಶೆಹಬಾಜ್ ಷರೀಫ್    

ಇಸ್ಲಾಮಾಬಾದ್‌: ಪಾಕಿಸ್ತಾನ ಚುನಾವಣೆಯಲ್ಲಿ ಅತಂತ್ರ ಜನಾದೇಶದಿಂದ ಉಂಟಾಗಿದ್ದ ರಾಜಕೀಯ ಅನಿಶ್ಚಿತತೆ ಕೊನೆಗೊಳ್ಳುವ ಮಹತ್ವದ ಬೆಳವಣಿಗೆ ನಡೆದಿದೆ.

ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ನಡುವಣ ಮಾತುಕತೆ ಕೊನೆಗೂ ಫಲಪ್ರದವಾಗಿದ್ದು, ಉಭಯ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚನೆಯ ಅಧಿಕಾರ ಹಂಚಿಕೆಯ ಒಪ್ಪಂದಕ್ಕೆ ಸಮ್ಮತಿಸಿವೆ. 

ಮಂಗಳವಾರ ತಡರಾತ್ರಿ ಇಲ್ಲಿನ ಜರ್ದಾರಿ ಹೌಸ್‌ನಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಅಧ್ಯಕ್ಷ ಬಿಲಾವಲ್ ಭುಟ್ಟೊ-ಜರ್ದಾರಿ ಅವರು, ’ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಧ್ಯಕ್ಷ ಶೆಹಬಾಜ್ ಷರೀಫ್ (72) ಅವರು ಮತ್ತೊಮ್ಮೆ ಪ್ರಧಾನಿಯಾಗಿ ಅಧಿಕಾರ ನಡೆಸಲಿದ್ದಾರೆ’ ಎಂದು ಘೋಷಿಸಿದರು. 

ADVERTISEMENT

ಅಂತೆಯೇ, ಪಿಪಿಪಿ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ (68) ಅವರು ಅಧ್ಯಕ್ಷ ಗಾದಿಗೆ ಜಂಟಿ ಅಭ್ಯರ್ಥಿಯಾಗಲಿದ್ದಾರೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಬಿಲಾವಲ್, ‘ಪಿಪಿಪಿ ಮತ್ತು ಪಿಎಂಎಲ್-ಎನ್ ಬಹುಮತಕ್ಕೆ ಅಗತ್ಯವಿರುವ ಸಂಖ್ಯಾಬಲವನ್ನು ಸಾಧಿಸಿವೆ. ನಾವು ಈಗ ಸರ್ಕಾರ ರಚಿಸುವ ಸ್ಥಿತಿಯಲ್ಲಿದ್ದೇವೆ. ಈ ರಾಜಕೀಯ ಮೈತ್ರಿಯು ದೇಶದ ಅರ್ಥ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ’ ಎಂದು ಹೇಳಿದರು.

ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಪಕ್ಷದ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಮತ್ತು ಸುನ್ನಿ ಇತ್ತೆಹಾದ್ ಕೌನ್ಸಿಲ್ (ಎಸ್‌ಐಸಿ) ಕೇಂದ್ರದಲ್ಲಿ ಸರ್ಕಾರ ರಚನೆಗಾಗಿ ಸಂಸತ್ತಿನಲ್ಲಿ ಸರಳ ಬಹುಮತ ಸಾಧಿಸಲು ವಿಫಲವಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶೆಹಬಾಜ್, ಕೇಂದ್ರದಲ್ಲಿ ಸರ್ಕಾರ ರಚಿಸಲು ಎರಡೂ ಪಕ್ಷಗಳು ಉತ್ತಮ ಸ್ಥಿತಿಯಲ್ಲಿವೆ. ಅಲ್ಲದೆ, ಉಭಯ ಪಕ್ಷಗಳಲ್ಲಿ ಒಗ್ಗಟ್ಟು ಇದೆ ಎಂದರು.

ಪಿಪಿಪಿ ಯಾವುದಾದರೂ ಖಾತೆಗಳನ್ನು ಪಡೆಯುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಹಬಾಜ್, ಬಿಲಾವಲ್ ನೇತೃತ್ವದ ಪಕ್ಷವು ಮೊದಲ ದಿನದಿಂದ ಯಾವುದೇ ಖಾತೆಗಳಿಗೆ ಬೇಡಿಕೆ ಇಟ್ಟಿಲ್ಲ ಎಂದು ಹೇಳಿರುವುದಾಗಿ ‘ದಿ ನ್ಯೂಸ್ ಇಂಟರ್‌ನ್ಯಾಷನಲ್’ ವರದಿ ಮಾಡಿದೆ.

266 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿ ಅಥವಾ ಸಂಸತ್ತಿನ ಕೆಳಮನೆಯಲ್ಲಿ ಚುನಾವಣೆ ನಡೆದಿರುವ 265 ಸ್ಥಾನಗಳಲ್ಲಿ ಸರ್ಕಾರ ರಚಿಸಲು ಯಾವುದೇ ಪಕ್ಷಕ್ಕೆ 133 ಸದಸ್ಯರ ಬೆಂಬಲ ಬೇಕು. ಫೆ. 8ರಂದು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಗೆ ಚುನಾವಣೆ ನಡೆದಿತ್ತು.

ಆಸಿಫ್ ಅಲಿ ಜರ್ದಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.