ADVERTISEMENT

ಬಾಗ್ದಾದ್‌ನ ಹಸಿರು ವಲಯ ಪ್ರವೇಶಿಸಲು ಯತ್ನಿಸಿದ ಪ್ರತಿಭಟನಕಾರರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2023, 0:30 IST
Last Updated 23 ಜುಲೈ 2023, 0:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬಾಗ್ದಾದ್: ಕೋಪನ್‍ಹೇಗನ್‌ನಲ್ಲಿರುವ ಇರಾಕ್‌ ರಾಯಭಾರ ಕಚೇರಿ ಮುಂದೆ ಕುರಾನ್ ಗ್ರಂಥ ಮತ್ತು ಇರಾಕ್‌ನ ರಾಷ್ಟ್ರಧ್ವಜವನ್ನು ಸುಟ್ಟುಹಾಕಿದ ಬೆನ್ನಲ್ಲೇ, ಬಾಗ್ದಾದ್‌ನಲ್ಲಿರುವ ಹಸಿರುವಲಯಕ್ಕೆ ಶನಿವಾರ ನೂರಾರು ಪ್ರತಿಭಟನಕಾರರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೆ, ಪ್ರತಿಭಟನಕಾರರನ್ನು ಭದ್ರತಾಪಡೆಗಳು ತಡೆದಿವೆ. 

ಹಸಿರುವಲಯಲ್ಲಿ ರಾಯಭಾರ ಕಚೇರಿಗಳು ಮತ್ತು ಇರಾಕ್ ಸರ್ಕಾರದ ಕಚೇರಿಗಳಿವೆ. ಈ ಪ್ರದೇಶವು ಭಾರಿ ಭದ್ರತಾ ವಲಯವಾಗಿದೆ. 

ಇರಾಕ್ ಮೂಲದ ಕ್ರಿಶ್ಚಿಯನ್ ಸಲ್ವಾನ್ ಮೊಮಿಕ ಎಂಬಾತ ಸ್ವೀಡನ್‌ನ ಸ್ಟಾಕ್‌ಹೋಂನಲ್ಲಿರುವ ಇರಾಕ್ ರಾಯಭಾರ ಕಚೇರಿ ಎದುರು ಕುರಾನ್‌ ಗ್ರಂಥಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದ. ಈ ವಿಷಯ ತಿಳಿದ ಇರಾನ್, ಇರಾಕ್ ಮತ್ತು ಲೆಬನಾನ್ ಸೇರಿದಂತೆ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಶುಕ್ರವಾರ ಪ್ರತಿಭಟನೆ ನಡೆಸಿದ್ದವು.

ADVERTISEMENT

ಇದರ ಬೆನ್ನಲ್ಲೇ ಹೇಳಿಕೆ ಬಿಡುಗಡೆ ಮಾಡಿರುವ ಇರಾಕ್‌ ವಿದೇಶಾಂಗ ಇಲಾಖೆ, ಘಟನೆಯನ್ನು ಕಟುವಾಗಿ ಖಂಡಿಸಿದೆ. ಈ ಬೆಳವಣಿಗೆ ವಿರುದ್ಧ ವಿಶ್ವ ಸಮುದಾಯ ನಿಲ್ಲಬೇಕಿದೆ ಎಂದು ಹೇಳಿಕೆಯಲ್ಲಿ ಆಗ್ರಹಿಸಲಾಗಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.