ADVERTISEMENT

ಭಾರತ ಮೂಲದ ಇಬ್ಬರಿಗೆ ಅಮೆರಿಕದ ಪ್ರತಿಷ್ಠಿತ ‘ಸಾಧಕ ವಲಸಿಗರು’ ಪ್ರಶಸ್ತಿ

ಪಿಟಿಐ
Published 2 ಜುಲೈ 2020, 8:22 IST
Last Updated 2 ಜುಲೈ 2020, 8:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನ್ಯೂಯಾರ್ಕ್: ಅಮೆರಿಕದ ಸ್ವಾತಂತ್ರ್ಯದ ದಿನ ನೆನಪಿಗಾಗಿ ಅಲ್ಲಿನ ಅಮೆರಿಕ ಫೌಂಡೇಷನ್‍ ನೀಡುವ ಪ್ರತಿಷ್ಠಿತ ‘ಸಾಧಕ ವಲಸಿಗರು’ ಪ್ರಶಸ್ತಿಯ ಗೌರವಕ್ಕೆ ಈ ವರ್ಷ ಭಾರತ ಮೂಲದ ಇಬ್ಬರು ಪಾತ್ರರಾಗಿದ್ದಾರೆ.

ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತರಾದ,ಭಾರತ ಮೂಲದ ಸಿದ್ಧಾರ್ಥ ಮುಖರ್ಜಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ರಾಜ್‍ ಶೆಟ್ಟಿ ಈ ಪ್ರಶಸ್ತಿಗೆ ಆಯ್ಕೆಯಾದವರು. ನ್ಯೂಯಾರ್ಕ್‍ನ ಕಾರ್ನೀಜ್ ಕಾರ್ಪೊರೇಷನ್ ಈ ಇಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಹೇಳಿಕೆ ತಿಳಿಸಿದೆ.

ಕೋವಿಡ್‍-19 ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದ ಬಿಕ್ಕಟ್ಟು ಎದುರಿಸುವಲ್ಲಿ ಈ ಇಬ್ಬರೂ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಒಟ್ಟು 38 ಜನರಿಗೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ADVERTISEMENT

ನವದೆಹಲಿಯಲ್ಲಿ ಜನಿಸಿದ್ದ ಮುಖರ್ಜಿ ಹೆಸರಾಂತ ಜೀವಶಾಸ್ತ್ರಜ್ಞರು. ಹಲವು ಕೃತಿಗಳನ್ನು ರಚಿಸಿರುವ ಅವರು ಪ್ರತಿಷ್ಠಿತ ಪುಲಿಟ್ಜಿರ್ ಪ್ರಶಸ್ತಿ ಪಡೆದಿದ್ದಾರೆ. ಅವರು ಕೊಲಂಬಿಯಾ ವಿ.ವಿಯ ಬೋಧಕ ಸಿಬ್ಬಂದಿ ಆಗಿದ್ದು, ಭಾರತ ಸರ್ಕಾರ 2014ರಲ್ಲಿ ಪದ್ಮಶ್ರೀ ನೀಡಿ ಗೌರವಿಸಿತ್ತು. ಅವರುನ್ಯೂಯಾರ್ಕ್ ರಾಜ್ಯಪಾಲರು ರಚಿಸಿರುವ 15 ಸದಸ್ಯರ ಬ್ಲೂ ರಿಬ್ಬನ್‍ ಕಮಿಷನ್ ಸದಸ್ಯರೂ ಹೌದು.

ಪ್ರೊ. ರಾಜ್‍ ಶೆಟ್ಟಿ ಅವರೂ ನವದೆಹಲಿಯಲ್ಲಿ ಜನಿಸಿದ್ದವರು. ಹಾರ್ವರ್ಡ್ ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ಈ ಪ್ರಶಸ್ತಿಯ ಗೌರವಕ್ಕೆ ಪಾತ್ರರಾಗುತ್ತಿರುವ ಅತಿ ಕಿರಿಯ ಪ್ರಾಧ್ಯಾಪಕರಾಗಿದ್ದಾರೆ. ಶೆಟ್ಟಿ ಅವರು ಆಪರ್ಚುನಿಟಿ ಇನ್‍ಸೈಟ್ಸ್‍ ಹೆಸರಿನ ಸಂಶೋಧನಾ ಪ್ರಯೋಗಾಲಯವನ್ನೂ ನಡೆಸುತ್ತಿದ್ದಾರೆ.

ಜನರ ಆರ್ಥಿಕ ವ್ಯವಸ್ಥೆಯ ಮೇಲೆಕೋವಿಡ್‍-19ರ ಪರಿಣಾಮ ಕುರಿತ ಅಧ್ಯಯನಕ್ಕೆ ಅವರು ಅಗತ್ಯ ಸಂಪನ್ಮೂಲ ಒದಗಿಸಿದ್ದರು. ಇದು, ನೀತಿ ನಿರೂಪಕರಿಗೆ ವಾಸ್ತವ ಸಂಗತಿಯನ್ನು ಆಧರಿಸಿ, ಅಗತ್ಯ ಆಡಳಿತ ತೀರ್ಮಾನಗಳನ್ನು ಕೈಗೊಳ್ಳಲು ನೆರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.