ADVERTISEMENT

ಅಮೆರಿಕ–ತಾಲಿಬಾನ್‌ ಒಪ್ಪಂದಕ್ಕೆ ಕ್ಷಣಗಣನೆ

ಸುದೀರ್ಘ ಕದನಕ್ಕೆ ಬೀಳಲಿದೆ ಪೂರ್ಣ ವಿರಾಮ? l ಅಫ್ಗಾನಿಸ್ತಾನದಲ್ಲಿ ಮೇರೆ ಮೀರಿದ ಸಂಭ್ರಮ

ಏಜೆನ್ಸೀಸ್
Published 25 ಫೆಬ್ರುವರಿ 2020, 19:45 IST
Last Updated 25 ಫೆಬ್ರುವರಿ 2020, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್‌ : ಅಮೆರಿಕ ಹಾಗೂ ತಾಲಿಬಾನ್‌ ಸಂಘಟನೆ ಮಧ್ಯೆ ಐತಿಹಾಸಿಕ ಕದನವಿರಾಮ ಒಪ್ಪಂದಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅಫ್ಗಾನಿಸ್ತಾನದಲ್ಲಿ ಬಿಡಾರ ಹೂಡಿರುವ ಸಾವಿರಾರು ಅಮೆರಿಕ ಸೈನಿಕರು ಈ ಒಪ್ಪಂದದ ಬಳಿಕ ತವರಿಗೆ ಮರಳಲಿದ್ದಾರೆ.

ದೋಹಾದಲ್ಲಿ ಶನಿವಾರ ಈ ಐತಿಹಾಸಿಕ ಒಪ್ಪಂದ ಏರ್ಪಡಲಿದ್ದು, ಅಮೆರಿಕ ಪರವಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹಿ ಹಾಕಲಿದ್ದಾರೆ.

ಈ ಒಪ್ಪಂದದ ಬಳಿಕ ಅಫ್ಗಾನಿಸ್ತಾನದಲ್ಲಿ ಸಂಘರ್ಷ ಸಂಪೂರ್ಣವಾಗಿ ಕೊನೆಗೊಳ್ಳುವುದೇ? ಉತ್ತರ ಅಷ್ಟೊಂದು ಸುಲಭವಾಗಿಲ್ಲ. ಅಮೆರಿಕ, ಅಫ್ಗಾನಿಸ್ತಾನ ಮತ್ತು ತಾಲಿಬಾನ್‌ ಪಡೆಗಳು ಪೂರ್ಣಪ್ರಮಾಣದ ಕದನವಿರಾಮಕ್ಕೆ ಇನ್ನೂ ಸಿದ್ಧವಾಗಿಲ್ಲ. ಆದರೆ, ಹೆಚ್ಚು–ಕಡಿಮೆ ಎರಡು ದಶಕಗಳ ಈ ಸಂಘರ್ಷದಲ್ಲಿ ಒಪ್ಪಂದದಂತಹ ಮಹತ್ವದ ಹೆಜ್ಜೆ ಇರಿಸಿರುವುದು ಇದು ಎರಡನೇ ಬಾರಿ. ಹೀಗಾಗಿ, ಈ ಹೆಜ್ಜೆ ಭಾರಿ ಮಹತ್ವ ಪಡೆದುಕೊಂಡಿದೆ.

ADVERTISEMENT

ಉಗ್ರರ ದಮನಕ್ಕಾಗಿ ಅಮೆರಿಕ ಸೇನೆ 2001ರಿಂದಲೇ ಅಫ್ಗಾನಿಸ್ತಾನದಲ್ಲಿ ಬೀಡುಬಿಟ್ಟಿದೆ. ಹತ್ತು ಸಾವಿರಕ್ಕೂ ಅಧಿಕ ಜೀವಗಳ ಬಲಿ ಪಡೆದ ಸುದೀರ್ಘ ಸಂಘರ್ಷ ಇನ್ನೇನು ಕೊನೆಗೊಳ್ಳಲಿದೆ ಎಂಬ ವರ್ತಮಾನ ಅಫ್ಗನ್‌ ಜನರಲ್ಲಿ ಸಂಭ್ರಮ ಮೂಡಿಸಿದೆ. ಆದರೆ, ಅನಿರೀಕ್ಷಿತ ದಾಳಿಗಳಿಂದ ರಕ್ತದೋಕುಳಿ ಹರಿಯುವ ಅಪಾಯ ಇದ್ದೇ ಇದೆ ಎಂಬ ಆತಂಕವೂ ಇದೆ ಎಂದು ವರದಿಯಾಗಿದೆ.

‘ಒಪ್ಪಂದದಿಂದ ಅಫ್ಗಾನಿಸ್ತಾನ ದೇಶದಾದ್ಯಂತ ಹಿಂಸೆಯ ಪ್ರಮಾಣ ತಗ್ಗಲಿದೆ’ ಎಂದು ಅಮೆರಿಕ ಹೇಳಿದ್ದರೆ, ‘ನಮ್ಮ ರಕ್ಷಣಾ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ’ ಎಂದು ಅಫ್ಗನ್‌ ಸೈನ್ಯ ಹೇಳಿಕೊಂಡಿದೆ. ‘ಇದೇನು ಸಂಪೂರ್ಣ ಕದನವಿರಾಮ ಅಲ್ಲ. ಕೆಲವು ಪ್ರದೇಶಗಳು ಮಾತ್ರ ಸಂಘರ್ಷಮುಕ್ತ ಆಗಲಿವೆ’ ಎಂದು ತಾಲಿಬಾನ್‌ ಅಭಿಪ್ರಾಯಪಟ್ಟಿದೆ.

ಒಪ್ಪಂದದ ಪ್ರಕಾರ, ಅಫ್ಗಾನಿಸ್ತಾನದಲ್ಲಿರುವ ತನ್ನ ಸೇನಾಬಲವನ್ನು ಸದ್ಯ 13 ಸಾವಿರದಿಂದ 8,600ಕ್ಕೆ ಅಮೆರಿಕ‌ ತಗ್ಗಿಸಲಿದೆ. ಉಳಿದ ಸೈನಿಕರು ಅಲ್ಲಿಯೇ ಬಿಡಾರ ಹೂಡಲಿದ್ದು, ಅಲ್ಲಿನ ಪರಿಸ್ಥಿತಿ ಮೇಲೆ ನಿಗಾ ಇಡಲಿದ್ದಾರೆ.

ಐಎಸ್‌ ಉಗ್ರರ ವಿರುದ್ಧದ ಹೋರಾಟವನ್ನೂ ಮುಂದುವರಿಸಲಿದ್ದಾರೆ. ತನ್ನ ಹಿಡಿತದಲ್ಲಿರುವ ಅಫ್ಗಾನಿಸ್ತಾನದ ನೆಲದಲ್ಲಿ ಜಿಹಾದಿಗಳು ರಕ್ಷಣೆ ಪಡೆಯದಂತೆ ನೋಡಿ ಕೊಳ್ಳುವುದಾಗಿ ತಾಲಿಬಾನ್‌ ಭರವಸೆ ನೀಡಿದೆ.

ಪಾಕಿಸ್ತಾನಕ್ಕೆ ಕತಾರ್ ಆಹ್ವಾನ

ದೋಹಾದಲ್ಲಿ ನಡೆಯಲಿರುವ ಅಮೆರಿಕ, ಅಫ್ಗನ್‌ ಮತ್ತು ತಾಲಿಬಾನ್‌ ನಡುವಿನ ಐತಿಹಾಸಿಕ ಒಪ್ಪಂದಕ್ಕೆ ಸಾಕ್ಷಿಯಾಗುವಂತೆ ಪಾಕಿಸ್ತಾನಕ್ಕೆ ಕತಾರ್‌ ಆಮಂತ್ರಣ ನೀಡಿದೆ.

ಪಾಕಿಸ್ತಾನದಲ್ಲಿರುವ ಕತಾರ್‌ ರಾಯಭಾರಿ ಸಾಕಿರ್‌ ಬಿನ್‌ ಮುಬಾರಕ್‌ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿಅವರಿಗೆ ಈ ಆಮಂತ್ರಣ ನೀಡಿದ್ದಾರೆ ಎಂದು ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ರೇಡಿಯೊ ವರದಿ ಮಾಡಿದೆ. 

ಒಪ್ಪಂದದ ನಿರ್ಧಾರವನ್ನು ಖುರೇಷಿಸ್ವಾಗತಿಸಿದ್ದಾರೆ. ಅಫ್ಗನ್‌ ಸಮಸ್ಯೆಗೆ ಮಿಲಿಟರಿ ಸಂಘರ್ಷದಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಪಾಕಿಸ್ತಾನದ ನಿಲುವಾಗಿದೆ ಎಂದು ಅವರು ಹೇಳಿದ್ದಾರೆ. ಅಫ್ಗನ್‌ನಲ್ಲಿ ಶಾಂತಿಯ
ಮರುಸ್ಥಾಪನೆಯಲ್ಲಿ ಪಾಕಿಸ್ತಾನ ಮತ್ತು ಕತಾರ್‌ ಮಹತ್ವದ ಪಾತ್ರ ವಹಿಸಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತನ್ನ ಮೇಲೆ 2001ರಲ್ಲಿ ನಡೆದ (9/11) ದಾಳಿಯ ಬಳಿಕ ಉಗ್ರರ ವಿರುದ್ಧ ಸಮರ ಸಾರಿ, ಅಫ್ಗಾನಿಸ್ತಾನದಲ್ಲಿ ಅಮೆರಿಕವು ಸೇನಾ ನೆಲೆ ಸ್ಥಾಪಿಸಿತ್ತು.

ಇದುವರೆಗಿನ ಸಂಘರ್ಷದಲ್ಲಿ ಅಮೆರಿಕ 2,400 ಯೋಧರನ್ನು ಕಳೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.