ರೋಮ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇಟಾಲಿಯನ್ ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ
(ಫೋಟೋ ಕೃಪೆ: X/@rajnathsingh)
ರೋಮ್: ಇಟಲಿ ಮತ್ತು ಫ್ರಾನ್ಸ್ ಪ್ರವಾಸದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇಟಲಿ ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ ಅವರೊಂದಿಗೆ ರೋಮ್‌ನಲ್ಲಿ ಸಭೆ ನಡೆಸಿದರು. ಬಳಿಕ ಭಾರತ ಮತ್ತು ಇಟಲಿ ನಡುವಿನ ರಕ್ಷಣಾ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದರು.
"ರೋಮ್‌ನಲ್ಲಿ ಇಟಾಲಿಯನ್ ರಕ್ಷಣಾ ಸಚಿವ ಗೈಡೋ ಕ್ರೊಸೆಟ್ಟೊ ಅವರೊಂದಿಗೆ ಮಹತ್ವದ ಸಭೆಯನ್ನು ನಡೆಸಿದ್ದೇವೆ. ನಾವು ತರಬೇತಿ, ಮಾಹಿತಿ ಹಂಚಿಕೆ ಮತ್ತು ಕಡಲ ಭದ್ರತೆ ಸೇರಿದಂತೆ ರಕ್ಷಣಾ ಸಹಕಾರಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸಿದ್ದೇವೆ" ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎರಡೂ ದೇಶಗಳು ಸೌಹಾರ್ದಯುತ ಸಂಬಂಧವನ್ನು ಹೊಂದಿವೆ. ನಮ್ಮ ರಕ್ಷಣಾ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಉಭಯ ರಾಷ್ಟ್ರಗಳು ಎದುರು ನೋಡುತ್ತಿವೆ ಎಂದು ಅವರು ಹೇಳಿದರು.
ರಾಜನಾಥ್ ಸಿಂಗ್ ಅವರ ಎರಡು ರಾಷ್ಟ್ರಗಳ ಭೇಟಿಯ ಮೊದಲ ಪ್ಯಾರಿಸ್‌ನಲ್ಲಿ ರಕ್ಷಣಾ ಸಚಿವ, ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವ ಸೆಬಾಸ್ಟಿಯನ್ ಲೆಕೊರ್ನು ಅವರನ್ನು ಭೇಟಿ ಮಾಡಿದರು. ಭಾರತ ನೌಕಾಪಡೆಗಾಗಿ ಫ್ರಾನ್ಸ್‌ನಿಂದ 26 ರಫೇಲ್ ಎಂ ಯುದ್ಧವಿಮಾನಗಳನ್ನು ಖರೀದಿಸಲು ಯೋಜಿಸುತ್ತಿರುವ ಸಮಯದಲ್ಲಿ ರಕ್ಷಣಾ ಸಚಿವರು ಫ್ರಾನ್ಸ್‌ಗೆ ಭೇಟಿ ನೀಡಿದ್ದಾರೆ.
ರೋಮ್ ಮತ್ತು ಪ್ಯಾರಿಸ್ ಎರಡರಲ್ಲೂ ರಕ್ಷಣಾ ಉದ್ಯಮದ ಸಿಇಒಗಳು ಮತ್ತು ಹಿರಿಯ ಪ್ರತಿನಿಧಿಗಳೊಂದಿಗೆ ಕೈಗಾರಿಕಾ ಸಹಕಾರಕ್ಕಾಗಿ ಸಂಭಾವ್ಯ ಅವಕಾಶಗಳ ಕುರಿತು ಅವರು ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.