ADVERTISEMENT

ಜಾರ್ಜ್‌ ಫ್ಲಾಯ್ಡ್ ಸಾವು: ಆಸ್ಟ್ರೇಲಿಯಾದಲ್ಲೂ ಪ್ರತಿಭಟನೆ

ಏಜೆನ್ಸೀಸ್
Published 13 ಜೂನ್ 2020, 10:35 IST
Last Updated 13 ಜೂನ್ 2020, 10:35 IST
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ   

ಸಿಡ್ನಿ: ಪೊಲೀಸ್‌ ಕ್ರೌರ್ಯದಿಂದ ಅಮೆರಿಕದಲ್ಲಿ ಮೃತಪಟ್ಟ ಜಾರ್ಜ್‌ ಫ್ಲಾಯ್ಡ್‌ ಸಾವು ಖಂಡಿಸಿ ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸತತ ಎರಡನೇ ವಾರವೂ ಮುಂದುವರಿದಿದೆ.

ಡಾರ್ವಿನ್‌ ನಗರದಲ್ಲಿ ಆರೋಗ್ಯ ಇಲಾಖೆಯ ಪೂರ್ವಾನುಮತಿಯೊಂದಿಗೆ ಪ್ರತಿಭಟನಕಾರರು ಒಟ್ಟುಗೂಡುತ್ತಿದ್ದಾರೆ. ಸಿಡ್ನಿ, ಆಡಿಲೇಡ್‌, ಪರ್ತ್ ನಗರಗಳಲ್ಲಿ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಂಡು ಪ್ರತಿಭಟನೆಗಳು ನಡೆಯುತ್ತಿವೆ.

‘ಪ್ರತಿಭಟನೆ ಹೆಸರಿನಲ್ಲಿ ಸೋಂಕು ಹರಡಿಸುವ ಯತ್ನ ನಡೆದರೆ ದಂಡ ವಿಧಿಸಲಿದ್ದು, ಬಂಧನಕ್ಕೂ ಒಳಗಾಗಬೇಕಾದಿತು’ ಎಂದು ನ್ಯೂ ಸೌತ್‌ ವೇಲ್ಸ್‌ನಲ್ಲಿ ಪೊಲೀಸರು ಎಚ್ಚರಿಸಿದ್ದಾರೆ.

ADVERTISEMENT

ಈ ವಾರಾಂತ್ಯದಲ್ಲಿ ಪರ್ತ್‌ನಲ್ಲಿ ಬೃಹತ್‌ ಪ್ರತಿಭಟನೆ ಆಯೋಜಿಸಿದ್ದು, ಸಂಘಟಕರ ಪ್ರಕಾರ ಸುಮಾರು 8,000 ಜನರು ಸೇರುವ ನಿರೀಕ್ಷೆಯಿದೆ. ಆದರೆ, ಪಶ್ಚಿಮ ಆಸ್ಟ್ರೆಲಿಯದ ಮುಖ್ಯಸ್ಥ ಮಾರ್ಕ್‌ ಮೆಕ್‌ಗೊವಾನ್‌ ಅವರು ಉದ್ದೇಶಿತ ಪ್ರತಿಭಟನೆಯನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ.

ಸಿಡ್ನಿ, ಮೆಲ್ಬೋರ್ನ್‌, ಬ್ರಿಸ್ಬೇನ್‌ನಲ್ಲಿ ಕಳೆದ ವಾರ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಜನರು ಸೇರಿದ್ದು, ವರ್ಣಭೇದ ನೀತಿ ಮತ್ತು ಪೊಲೀಸ್‌ ವಶದಲ್ಲಿ ಆಸ್ಟ್ರೇಲಿಯ ಮೂಲ ನಿವಾಸಿಗಳ ಸಾವಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.