ADVERTISEMENT

ತಿಮಿಂಗಿಲ ಬಾಯಿಗೆ ಸಿಲುಕಿಯೂ ಕ್ಷಣದಲ್ಲೇ ಪಾರಾದ ಕಡಲ ಸಿಂಹ

ಅಪರೂಪದ ಕ್ಷಣ ಸೆರೆಹಿಡಿದ ಛಾಯಾಗ್ರಾಹಕ ಚೇಸ್‌ ಡೆಕ್ಕರ್‌

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 20:00 IST
Last Updated 31 ಜುಲೈ 2019, 20:00 IST
ತಿಮಿಂಗಿಲದ ಬಾಯಿಗೆ ಸಿಲುಕಿಯೂ ಜಾರಿ ತಪ್ಪಿಸಿಕೊಂಡ ಕಡಲ ಸಿಂಹ – ಚೇಸ್‌ ಡೆಕ್ಕರ್‌/ಎಎಫ್‌ಪಿ ಚಿತ್ರ
ತಿಮಿಂಗಿಲದ ಬಾಯಿಗೆ ಸಿಲುಕಿಯೂ ಜಾರಿ ತಪ್ಪಿಸಿಕೊಂಡ ಕಡಲ ಸಿಂಹ – ಚೇಸ್‌ ಡೆಕ್ಕರ್‌/ಎಎಫ್‌ಪಿ ಚಿತ್ರ   

ಲಾಸ್‌ ಏಂಜಲೀಸ್‌: ತಿಮಿಂಗಿಲವೊಂದರ ಬಾಯಿಗೆ ಸಿಲುಕಿಯೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಕಡಲ ಸಿಂಹದ ದೃಶ್ಯವನ್ನು ಕ್ಲಿಕ್ಕಿಸಿರುವ ವನ್ಯಜೀವಿ ಛಾಯಾಗ್ರಾಹಕ ಚೇಸ್‌ ಡೆಕ್ಕರ್‌, ಇದು ‘ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಸಿಗುವ ಕ್ಷಣ’ ಎಂದು ಬಣ್ಣಿಸಿದ್ದಾರೆ.

ಕಳೆದ ವಾರ ಕ್ಯಾಲಿಫೋರ್ನಿಯಾದ ಮಾಂಟೆರೆ ಕೊಲ್ಲಿಯ ತೀರದಲ್ಲಿ ತಿಮಿಂಗಿಲ ವೀಕ್ಷಣಾ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಛಾಯಾಗ್ರಾಹಕ ಚೇಸ್‌ ಡೆಕ್ಕರ್‌ ಈ ಕ್ಷಣವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿಸಿದ್ದಾರೆ.

ಸಮುದ್ರ ಜೀವಶಾಸ್ತ್ರಜ್ಞರೂ ಆಗಿರುವ 27 ವರ್ಷದ ಡೆಕ್ಕರ್‌ ದಶಕದಿಂದ ವನ್ಯಜೀವಿ ಛಾಯಾಗ್ರಹಣದ ಹವ್ಯಾಸ ರೂಢಿಸಿಕೊಂಡಿದ್ದಾರೆ. ‘ಈ ಅವಧಿಯಲ್ಲಿ ಸಾಕಷ್ಟು ಕುತೂಹಲಭರಿತ ಮತ್ತು ಕ್ರೇಜಿ ಚಿತ್ರಗಳನ್ನು ಸೆರೆಹಿಡಿದಿದ್ದೇನೆ. ಆದರೆ ಮಾಂಟೆರೆ ಕೊಲ್ಲಿಯಲ್ಲಿ ತೆಗೆದ ಚಿತ್ರ ಅತ್ಯಂತ ಅಪರೂಪದ್ದು’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಜುಲೈ 22ರಂದು ತಿಮಿಂಗಿಲ ವೀಕ್ಷಣಾ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ, ತಿಮಿಂಗಿಲಗಳ ಗುಂಪು ಆಹಾರ ಬೇಟೆ ನಡೆಸುತ್ತಿದ್ದದ್ದು ಕಂಡು ಬಂದಿತು. ಹಾಗೇ ವೀಕ್ಷಿಸುತ್ತಿದ್ದಾಗ ‘ಹಂಪ್‌ಬ್ಯಾಕ್‌’ ತಿಮಿಂಗಲವೊಂದು ತನ್ನ ಬಾಯಿಯನ್ನು ಮೇಲಕ್ಕೆತ್ತಿ ಕಡಲ ಸಿಂಹವನ್ನು ಹಿಡಿಯಲು ಯತ್ನಿಸಿತು. ಸಿಂಹಕ್ಕೆ ತಪ್ಪಿಸಿಕೊಳ್ಳಲು ಅವಕಾಶವೇ ಇರಲಿಲ್ಲ. ಆದರೂ ಅದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಈ ಗಳಿಗೆಯನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿದೆ’ ಎಂದು ಅವರು ವಿವರಿಸಿದ್ದಾರೆ.

‘ತಿಮಿಂಗಿಲ ಬಾಯಿ ಮುಚ್ಚುವುದಕ್ಕೂ ಮುನ್ನವೇ ಕಡಲ ಸಿಂಹವು ಅದರ ಬಾಯಿಯಿಂದ ಜಾರಿ ತಪ್ಪಿಸಿಕೊಂಡಿತು. ಈ ರೋಮಾಂಚಕಾರಿ ದೃಶ್ಯವನ್ನು ಜೀವನದಲ್ಲಿ ಮತ್ತೆಂದೂ ಕಾಣಲಾಗದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.