ADVERTISEMENT

ಶ್ರೀಲಂಕಾ ಜೈಲಿನಿಂದ ಬಿಡುಗಡೆ: ಚೆನ್ನೈ ತಲುಪಿದ ತಮಿಳುನಾಡಿನ 13 ಮೀನುಗಾರರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2024, 6:03 IST
Last Updated 9 ಜನವರಿ 2024, 6:03 IST
   

ಕೊಲಂಬೊ: ಇತ್ತೀಚೆಗೆ ಶ್ರೀಲಂಕಾ ಜೈಲಿನಿಂದ ಬಿಡುಗಡೆಗೊಂಡ ತಮಿಳುನಾಡಿನ 13 ಮೀನುಗಾರರು ಇಂದು (ಮಂಗಳವಾರ) ಮುಂಜಾನೆ ಚೆನ್ನೈ ತಲುಪಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸುದ್ದಿಸಂಸ್ಥೆ 'ಪಿಟಿಐ' ಮಾಹಿತಿ ಹಂಚಿಕೊಂಡಿದೆ.

ಜನವರಿ 5ರಂದು ಭಾರತದ 21 ಮೀನುಗಾರರನ್ನು ಚೆನ್ನೈಗೆ ವಾಪಸ್ ಕಳುಹಿಸಲಾಗಿದೆ ಎಂದು ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ತಿಳಿಸಿದೆ.

ADVERTISEMENT

ಅಂತರರಾಷ್ಟ್ರೀಯ ಸಮುದ್ರ ಗಡಿ ರೇಖೆಯನ್ನು ದಾಟಿ ಶ್ರೀಲಂಕಾದ ಜಲ ಪ್ರದೇಶದಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಮೀನುಗಾರರನ್ನು ಬಂಧಿಸಲಾಗಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದರು. ಶ್ರೀಲಂಕಾ ನೌಕಾಪಡೆಯಿಂದ ಭಾರತೀಯ ಮೀನುಗಾರರನ್ನು ಪದೇ ಪದೇ ಬಂಧಿಸುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಸಾಂಪ್ರದಾಯಿಕ ಮೀನುಗಾರಿಕೆ ಹಕ್ಕುಗಳನ್ನು ಕಾಪಾಡುವಲ್ಲಿ ಕೇಂದ್ರವು ಅಗತ್ಯವಾಗಿ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.