ADVERTISEMENT

ಪಾಕ್: ಅಲ್ಪಸಂಖ್ಯಾತರಿಗೆ ಧಾರ್ಮಿಕ ಕಿರುಕುಳ ನಿರಂತರ: ಫಾತಿಮಾ ಗುಲ್

ಪಿಟಿಐ
Published 23 ಅಕ್ಟೋಬರ್ 2019, 18:30 IST
Last Updated 23 ಅಕ್ಟೋಬರ್ 2019, 18:30 IST
ಫಾತಿಮಾ ಗುಲ್
ಫಾತಿಮಾ ಗುಲ್    

ವಾಷಿಂಗ್ಟನ್: ‘ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳು, ಕ್ರೈಸ್ತರು ಹಾಗೂ ಅಹ್ಮದೀಯರಿಗೆ ಧಾರ್ಮಿಕ ಕಿರುಕುಳ ನೀಡುವುದು ಸದ್ದಿಲ್ಲದೆ ಮುಂದುವರಿದಿದೆ’ ಎಂದು ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿರುವ ಪಾಕಿಸ್ತಾನ ಸಂಜಾತ ಅಮೆರಿಕನ್ ಫಾತಿಮಾ ಗುಲ್ ಹೇಳಿದ್ದಾರೆ.

‘ಪಾಕ್ ಸರ್ಕಾರ ತಮಗೆ ನೀಡಿರುವ ಸ್ವಾತಂತ್ರ್ಯ ಬಳಸಿಕೊಂಡು ಧಾರ್ಮಿಕ ತೀವ್ರವಾದಿಗಳು ಇವರನ್ನು ಶೋಷಿಸುತ್ತಿದ್ದಾರೆ. ಮಹಿಳೆಯರಿಗೆ ಅಪಾಯ ಒಡ್ಡುವ ರಾಷ್ಟ್ರಗಳಲ್ಲಿ ಪಾಕಿಸ್ತಾನ ಸಹ ಒಂದು’ ಎಂದು ಅಮೆರಿಕದ ಸಂಸದರ ಸಮಿತಿಯೊಂದಕ್ಕೆ ಅವರು ತಿಳಿಸಿದ್ದಾರೆ.

ದಕ್ಷಿಣ ಏಷ್ಯಾದಲ್ಲಿನ ಮಾನವ ಹಕ್ಕುಗಳ ಸ್ಥಿತಿ ಕುರಿತು ಮಾಹಿತಿ ಪಡೆಯುತ್ತಿದ್ದ ಸಮಿತಿ ಎದುರು ಹಾಜರಾಗಿದ್ದ ಅವರು, ‘ಅಮೆರಿಕ ನೇರವಾಗಿ ಪಾಕಿಸ್ತಾನ ಸರ್ಕಾರಕ್ಕೆ ಆರ್ಥಿಕ ನೆರವು ನೀಡುತ್ತಿರುವುದರಿಂದ, ಪಾಕ್ ಅಧಿಕಾರಿಗಳು ಪ್ರಜೆಗಳ ಮೇಲೆ ತಮ್ಮ ಹಿಡಿತ ಹೆಚ್ಚಿಸಲು ಸಾಧ್ಯವಾಗುತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಮುಖ್ಯವಾಗಿ ಸೇನೆ ಮತ್ತು ಮುಸ್ಲಿಂ ತೀವ್ರವಾದಿ ಸಂಘಟನೆಗಳೇ ಪಾಕಿಸ್ತಾನದ ಆಡಳಿತ ನಡೆಸುತ್ತಿವೆ. ಪಾಕಿಸ್ತಾನದ ಬಹುತೇಕ ಪ್ರಜೆಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಅವರ ಬೆಂಬಲಿಗರಿಂದ ಪ್ರತಿದಿನ ಧಾರ್ಮಿಕ ಹಾಗೂ ರಾಜಕೀಯ ಕಿರುಕುಳ ಎದುರಿಸುತ್ತಿದ್ದಾರೆ. 1990ರಿಂದ ಈತನಕ ಧರ್ಮನಿಂದನೆ ಆರೋಪದ ಮೇಲೆ 70 ಜನರ ಹತ್ಯೆಯಾಗಿದೆ. ಪ್ರಸ್ತುತ 40 ಜನರು ಜೀವಾವಧಿ ಹಾಗೂ ಮರಣ ದಂಡನೆ ಎದುರಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಮಾನವ ಹಕ್ಕುಗಳ ಶೋಷಣೆ: ‘ಸರ್ಕಾರವೇ ಧರ್ಮ ನಿಂದನೆಯನ್ನು ಅಪರಾಧ ಎಂದು ಕಾನೂನು ಮಾಡಿದರೆ, ಆಗ ಅಲ್ಪಸಂಖ್ಯಾತರನ್ನು ಸಹಿಸದ ಯಾವುದೇ ವ್ಯಕ್ತಿ, ಆತ ಧರ್ಮನಿಂದನೆ ಮಾಡಿದ್ದಾನೆ ಎಂದು ಆರೋಪಿಸುವುದುಸುಲಭವಾಗುತ್ತದೆ. ಒಂದು ವೇಳೆ ಧರ್ಮನಿಂದನೆಗೆ ಮರಣದಂಡನೆ ವಿಧಿಸಿದರೆ, ಆಗ ಅದು ಮಾನವ ಹಕ್ಕುಗಳ ಘೋರವಾದ ಶೋಷಣೆ’ ಎಂದು ಸಂಸದರ ಸಮಿತಿಯ ಮುಖ್ಯಸ್ಥ ಬ್ರಾಡ್ ಶರ್ಮನ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.