ADVERTISEMENT

ಕೊರೊನಾ ವೈರಾಣು ಕೊಲ್ಲುವ ಎನ್‌–95 ಮಾಸ್ಕ್ ಸಂಶೋಧನೆ

ಪಿಟಿಐ
Published 4 ಜುಲೈ 2022, 13:23 IST
Last Updated 4 ಜುಲೈ 2022, 13:23 IST
ರಾಯಿಟರ್ಸ್ ಚಿತ್ರ
ರಾಯಿಟರ್ಸ್ ಚಿತ್ರ   

ನವದೆಹಲಿ: ಕೋವಿಡ್ ವೈರಾಣು ಹರಡುವುದನ್ನು ತಡೆಯುವುದಷ್ಟೇ ಅಲ್ಲ. ಕೋವಿಡ್‌ಗೆ ಕಾರಣವಾಗುವ ಸಾರ್ಸ್‌–ಕೋವ್–2 ವೈರಸ್ ಕೊಲ್ಲುವ ಎನ್‌–95 ಮಾಸ್ಕ್ ಅನ್ನು ಅಮೆರಿಕದ ಸಂಶೋಧಕರು ತಯಾರಿಸಿದ್ದಾರೆ.

ಈ ಮಾಸ್ಕ್ ಅನ್ನು ದೀರ್ಘ ಸಮಯದವರಗೆ ಬಳಸಬಹುದಾಗಿದ್ದು, ಕಡಿಮೆ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿಸುತ್ತದೆ. ಪದೇ ಪದೆ ಮಾಸ್ಕ್ ಬದಲಿಸುವ ಉಸಾಬರಿಯೂ ತಪ್ಪುತ್ತದೆ ಎನ್ನುತ್ತಾರೆ ಸಂಶೋಧಕರು.

‘ದೀರ್ಘಾವಧಿ ಬಾಳಿಕೆ ಮತ್ತು ವೈಯಕ್ತಿಕ ರಕ್ಷಣಾ ಸಾಮಗ್ರಿ ತಯಾರಿಕೆಯ ಪ್ರಯತ್ನದ ಮೊದಲ ಹೆಜ್ಜೆ ಇದಾಗಿದೆ’ ಎಂದು ಅಮೆರಿಕದ ರೆನ್‌ಸೆಲ್ಲರ್ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್‌ನ ಎಡ್ಮಂಡ್ ಪಲೆರ್ಮೊ ಝಾ ಹೇಳಿದ್ದಾರೆ.

‘ಅಪ್ಲೈಡ್ ಎಸಿಎಸ್ ಮೆಟೀರಿಯಲ್ಸ್ ಅಂಡ್ ಇಂಟರ್‌ಫೇಸ್‌‘ ಜರ್ನಲ್‌ನಲ್ಲಿ ಇತ್ತೀಚೆಗೆ ಪ್ರಕಟವಾದ ಸಂಶೋಧನೆಯಲ್ಲಿ, ತಂಡವು ಎನ್-95 ಫೇಸ್ ಮಾಸ್ಕ್‌ಗಳಲ್ಲಿ ಬಳಸಲಾಗುವ ಪಾಲಿಪ್ರೊಪಿಲೀನ್ ಫಿಲ್ಟರ್‌ಗಳಿಗೆ ಬ್ರಾಡ್-ಸ್ಪೆಕ್ಟ್ರಮ್ ಆಂಟಿಮೈಕ್ರೊಬಿಯಲ್ ಪಾಲಿಮರ್‌ಗಳನ್ನು ಯಶಸ್ವಿಯಾಗಿ ಕಸಿಮಾಡಿರುವುದನ್ನು ಉಲ್ಲೇಖಿಸಲಾಗಿದೆ.

‘ಮಾಸ್ಕ್‌ಗಳ ಫೈಬರ್‌ ಜಾಲಗಳಲ್ಲಿ ಬದಲಾವಣೆ ಮಾಡುವಾಗ ಅದಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಉಸಿರಾಟಕ್ಕೆ ತೊಂದರೆಯಾಗುವ ಅಪಾಯವಿದೆ. ಹೀಗಾಗಿ, ತಂಡವು ನೇರಳಾತೀತ (ಯವಿ) ಕಿರಣಗಳನ್ನು ಬಳಸಿಕೊಂಡು ನಾನ್ ಪಾಲಿಪ್ರೊಪಿಲೀನ್ ಬಟ್ಟೆಗಳ ಫೈಬರ್ ಮೇಲ್ಮೈಗಳಿಗೆ ಆಂಟಿಮೈಕ್ರೊಬಿಯಲ್ ಕ್ವಾಟರ್ನರಿ ಅಮೋನಿಯಂ ಪಾಲಿಮರ್‌ಗಳನ್ನು ಜೋಡಿಸಿದೆ.

ADVERTISEMENT

‘ನಾವು ಅಭಿವೃದ್ಧಿಪಡಿಸಿರುವ ಈ ಪಾಲಿಮರ್ ಲೇಪನವನ್ನು ರಚಿಸಲು ಸರಳವಾದ ರಸಾಯನಶಾಸ್ತ್ರವನ್ನು ಬಳಸಿದ್ಧೇವೆ. ಅವು ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಅವುಗಳ ಹೊರ ಪದರವನ್ನು ತೆರೆಯುವ ಮೂಲಕ ಕೊಲ್ಲುತ್ತವೆ’ ಎಂದು ಝಾ ಹೇಳಿದರು.

‘ಇದು ತುಂಬಾ ಸರಳ ವಿಧಾನವಾಗಿದೆ’ ಎಂದೂ ಅವರು ಹೇಳಿದರು.

ಈ ತಂಡವು ತಮ್ಮ ಪ್ರಕ್ರಿಯೆಯಲ್ಲಿ ಯುವಿ ಲೈಟ್ ಮತ್ತು ಅಸಿಟೋನ್ ಅನ್ನು ಮಾತ್ರ ಬಳಸಿದೆ. ಅವುಗಳು ವ್ಯಾಪಕವಾಗಿ ಲಭ್ಯವಿದ್ದು, ಈ ಪ್ರಕ್ರಿಯೆ ಕಾರ್ಯಗತಗೊಳಿಸಲು ಸುಲಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.