ADVERTISEMENT

ಬ್ರಿಟನ್‌ ಜಲಾಂತರ್ಗಾಮಿ ನೌಕೆಯಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ: ತನಿಖೆಗೆ ಆದೇಶ

ಏಜೆನ್ಸೀಸ್
Published 29 ಅಕ್ಟೋಬರ್ 2022, 13:48 IST
Last Updated 29 ಅಕ್ಟೋಬರ್ 2022, 13:48 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಲಂಡನ್‌: ಜಲಂತರ್ಗಾಮಿ ನೌಕೆಯಲ್ಲಿನ ಮಹಿಳಾ ಸಿಬ್ಬಂದಿಗೆ ಬೆದರಿಸಿ, ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎನ್ನುವ ಆರೋಪದ ಬಗ್ಗೆತನಿಖೆಗೆ ಆದೇಶಿಸಲಾಗಿದೆ ಎಂದು ಬ್ರಿಟನ್‌ನ ರಾಯಲ್ ನೇವಿಯ ಮುಖ್ಯಸ್ಥರು ಹೇಳಿದ್ದಾರೆ.

‘ಈ ಆರೋಪಗಳು ಅಸಹ್ಯಕರವಾಗಿವೆ’ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮ್‌ ಬೆನ್ ಕಿ ಪ್ರತಿಕ್ರಿಯಿಸಿದ್ದಾರೆ.

‘ಲೈಂಗಿಕ ದೌರ್ಜನ್ಯವಾಗಲೀ, ಕಿರುಕುಳಕ್ಕಾಗಲೀ ರಾಯಲ್ ನೇವಿಯಲ್ಲಿ ಅವಕಾಶವಿಲ್ಲ ಮತ್ತು ಅದನ್ನು ಸಹಿಸಲಾಗುವುದಿಲ್ಲ.ಈ ಆರೋಪಗಳನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ನನ್ನ ಹಿರಿಯ ತಂಡಕ್ಕೆ ಸೂಚಿಸಿದ್ದೇನೆ. ತಪ್ಪಿತಸ್ಥರೆಂದು ಸಾಬೀತಾದವರು, ಯಾರಾದರೂ ಆಗಲಿ ಅವರ ಶ್ರೇಣಿ, ಸ್ಥಾನಮಾನವನ್ನೂ ಲೆಕ್ಕಿಸದೆ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು’ಎಂದು ಬೆನ್ ಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಜಲಾಂತರ್ಗಾಮಿ ನೌಕೆಯಲ್ಲಿನ ಮಹಿಳಾ ಸಿಬ್ಬಂದಿಯನ್ನು ಲೈಂಗಿಕವಾಗಿ ಬೆದರಿಸುವಂಥದ್ದು ನಿರಂತರವಾಗಿ ನಡೆಯುತ್ತಿದ್ದು, ಅವರು ದೈಹಿಕ ಹಲ್ಲೆಗಳನ್ನೂ ಎದುರಿಸುತ್ತಿದ್ದಾರೆ. ಹೊಸ ಹೆಣ್ಣು ಬಂದಾಗಲೆಲ್ಲಾ ನೌಕೆಯಲ್ಲಿರುವ ಪುರುಷ ಸಿಬ್ಬಂದಿ ರಣಹದ್ದುಗಳಂತಾಗುತ್ತಾರೆ ಎಂದುನೌಕೆಯ ಮಾಜಿ ಲೆಫ್ಟಿನೆಂಟ್ ಸೋಫಿ ಬ್ರೂಕ್ ಆರೋಪಿಸಿದ್ದಾರೆ’ ಎಂದು ‘ದ ಡೈಲಿ ಮೇಲ್’ ಪತ್ರಿಕೆ ಶನಿವಾರ ವರದಿ ಮಾಡಿದೆ.

ರಾಯಲ್‌ ನೇವಿಗೆ ಸಂಬಂಧಪಟ್ಟ ಸೂಕ್ಷ್ಮವಾದ ಮಾಹಿತಿಯೊಂದನ್ನು ಇಮೇಲ್ ಮೂಲಕ ಹಂಚಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಸೋಫಿ ಅವರನ್ನು ಕೆಲ ತಿಂಗಳ ಹಿಂದೆಯಷ್ಟೇ ಸೇವೆಯಿಂದ ಅಮಾನತುಗೊಳಿಸಿ ಜೈಲುಶಿಕ್ಷೆ ವಿಧಿಸಲಾಗಿದೆ.

‘ಜಲಾಂತರ್ಗಾಮಿ ನೌಕೆಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ನಿರಂತರವಾಗಿ ಲೈಂಗಿಕ ಕಿರುಕುಳಕ್ಕೊಳಗಾಗುತ್ತಿದ್ದಾರೆ ಎಂದು ನೌಕಾಪಡೆಯ ಆದರೆ, ಹೆಸರು ಹೇಳಲಿಚ್ಛಿಸದ ಅನಾಮಧೇಯೊಬ್ಬರು ಆರೋಪಿಸಿದ್ದಾರೆ’ ಎಂದೂ ಪತ್ರಿಕೆ ವರದಿಯಲ್ಲಿ ಉಲ್ಲೇಖಿಸಿದೆ.

ನಿರ್ದಿಷ್ಟ ಆರೋಪಗಳಿಗೆ ರಕ್ಷಣಾ ಸಚಿವಾಲಯವು ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಇಂಥ ಅನುಚಿತ ವರ್ತನೆಯ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

ಬ್ರಿಟನ್‌ನ ರಾಯಲ್ ನೇವಿಯಲ್ಲಿರುವ ಸಿಬ್ಬಂದಿಯಲ್ಲಿ ಶೇ 10ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ. 2011ರಿಂದ ಜಲಾಂತರ್ಗಾಮಿ ನೌಕೆಗಳಲ್ಲಿ ಮಹಿಳೆಯರು ಸೇವೆ ಸಲ್ಲಿಸಲು ಅರ್ಹತೆ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.