ADVERTISEMENT

ನೊಬೆಲ್‌ ವಿಜೇತ, ರಷ್ಯಾ ಪತ್ರಕರ್ತನಿಗೆ ವಿದೇಶಿ ಗೂಢಚರ ಪಟ್ಟ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2023, 15:35 IST
Last Updated 2 ಸೆಪ್ಟೆಂಬರ್ 2023, 15:35 IST
ಡಿಮಿಟ್ರಿ ಮುರಾಟೋವ್ 
ಡಿಮಿಟ್ರಿ ಮುರಾಟೋವ್    

ಮಾಸ್ಕೊ (ಎಪಿ): ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಪತ್ರಕರ್ತ ಡಿಮಿಟ್ರಿ ಮುರಾಟೋವ್ ಅವರನ್ನು ವಿದೇಶಿ ಗೂಢಚಾರಿ ಎಂದು ರಷ್ಯಾ ಸರ್ಕಾರ ಶುಕ್ರವಾರ ಘೋಷಿಸಿದೆ.  ರಾಷ್ಟ್ರವನ್ನು ಟೀಕಿಸುವ ಮತ್ತು ಸ್ವತಂತ್ರ ವರದಿಗಾರಿಕೆಯನ್ನು ಹತ್ತಿಕ್ಕುವ ಕ್ರಮಗಳನ್ನು ಈ ಮೂಲಕ ರಷ್ಯಾ ಸರ್ಕಾರ ಮುಂದುವರಿಸಿದೆ.

ಮುರಾಟೋವ್‌ ಅವರು ‘ನೊವಾಯ ಗೆಜೆಟಾ’ ಪತ್ರಿಕೆಯ ಮುಖ್ಯ ಸಂಪಾದಕರಾಗಿದ್ದಾರೆ. ತನಿಖಾ ವರದಿಗಾರಿಕೆ ಮತ್ತು ಆಗಾಗ್ಗೆ ಕ್ರೆಮ್ಲಿನ್‌ (ಪುಟಿನ್‌ ಆಡಳಿತ ಕಚೇರಿ) ವಿರುದ್ಧ ಟೀಕೆಗಳನ್ನು ಮಾಡುವುದರಿಂದಾಗಿ ‘ನೊವಾಯ ಗೆಜೆಟಾ’ ವಿದೇಶಗಳಲ್ಲಿ ವ್ಯಾಪಕವಾಗಿ ಗೌರವ ಸಂಪಾದಿಸಿಕೊಂಡಿದೆ.

ಮುರಾಟೋವ್ ಅವರು 2021ರ ಸಾಲಿನ ನೊಬೆಲ್ ಪ್ರಶಸ್ತಿಯ ಸಹ– ಪುರಸ್ಕೃತರಾಗಿದ್ದರು. ಅವರು ತಮ್ಮ ನೊಬೆಲ್ ಪದಕವನ್ನು ಹರಾಜಿಗೆ ಹಾಕಿ, ಅದರಿಂದ ಬಂದ 103.5 ದಶಲಕ್ಷ ಅಮೆರಿಕನ್‌ ಡಾಲರ್‌ ಹಣವನ್ನು ಉಕ್ರೇನ್‌ ನಿರಾಶ್ರಿತ ಮಕ್ಕಳ ನೆರವಿಗೆ ಬಳಸುವುದಾಗಿ ಪ್ರಕಟಿಸಿದ್ದರು. 

ADVERTISEMENT

ಉಕ್ರೇನ್‌ನಲ್ಲಿನ ತನ್ನ ಸೇನಾ ಕಾರ್ಯಾಚರಣೆಗಳನ್ನು ಟೀಕಿಸುವ ಅಥವಾ ರಷ್ಯಾ ಸೈನಿಕರನ್ನು ಕುಖ್ಯಾತಗೊಳಿಸುವಂತಹ ಹೇಳಿಕೆಗಳನ್ನು ನೀಡುವವರನ್ನು ಶಿಕ್ಷಿಸಲು ರಷ್ಯಾ ಕಠಿಣ ಕಾನೂನುಗಳನ್ನು ಜಾರಿಗೊಳಿಸಿದ ನಂತರ, ‘ನೊವಾಯಾ ಗೆಜೆಟಾ’ ಸಂಘರ್ಷ ಕೊನೆಗೊಳ್ಳುವವರೆಗೂ ಪ್ರಕಟಣೆ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. 

ಈ ಪತ್ರಿಕೆಯಲ್ಲಿದ್ದ ಅನೇಕ ಪತ್ರಕರ್ತರು ಲಾಟ್ವಿಯಾ ಮೂಲದ ‘ನೊವಾಯಾ ಗೆಜೆಟಾ ಯುರೋಪ್’ ಎಂಬ ಹೊಸ ಪತ್ರಿಕೆಯನ್ನು ಪ್ರಾರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.