
ಕೀವ್: 650ಕ್ಕೂ ಅಧಿಕ ಡ್ರೋನ್‌ಗಳು ಹಾಗೂ 36 ಕ್ಷಿಪಣಿಗಳನ್ನು ಬಳಸಿ ಸೋಮವಾರ ರಾತ್ರೋರಾತ್ರಿ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದೆ. ಮಂಗಳವಾರ ಮುಂಜಾನೆವರೆಗೂ ನಡೆದ ಈ ದಾಳಿಯಲ್ಲಿ 4 ವರ್ಷದ ಮಗು ಸೇರಿ ಮೂವರು ಮೃತಪಟ್ಟಿದ್ದಾರೆ.
ಉಕ್ರೇನ್‌ನ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. 120 ಮನೆಗಳು ಹಾನಿಗೀಡಾಗಿದ್ದು, 13 ಪ್ರಾಂತ್ಯಗಳಲ್ಲಿ ವಿದ್ಯುತ್ ಘಟಕಗಳ ಮೇಲೆ ದಾಳಿ ನಡೆದ ಪರಿಣಾಮ ಹಲವೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ, ಕೈಗಾರಿಕೆ, ಬಂದರು ಹಾಗೂ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ಒಂದು ಸರಕು ಸಾಗಣೆ ಹಡಗು ಕೂಡ ಹಾನಿಗೀಡಾಗಿದೆ ಎಂದಿದ್ದಾರೆ.
ರಷ್ಯಾ–ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಶಾಂತಿ ಒಪ್ಪಂದ ಮಾತುಕತೆ ನಡೆಯುತ್ತಿರುವಾಗಲೇ ರಷ್ಯಾ ಈ ದಾಳಿ ನಡೆಸಿರುವುದನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹಾಗೂ ಐರೋಪ್ಯ ಅಧಿಕಾರಿಗಳು ಖಂಡಿಸಿದ್ದಾರೆ.
‘ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪಿಸುವ ಪ್ರಾಮಾಣಿಕ ಪ್ರಯತ್ನವನ್ನು ರಷ್ಯಾ ಅಧ್ಯಕ್ಷ ಪುಟಿನ್ ಮಾಡುತ್ತಲೇ ಇಲ್ಲ ಎಂಬುದಕ್ಕೆ ಇದೇ ನಿದರ್ಶನ’ ಎಂದು ಅಧಿಕಾರಿಗಳು ದೂರಿದ್ದಾರೆ.
ಉದ್ದೇಶ ಸ್ಪಷ್ಟವಾಗಿದೆ: ಕ್ರಿಸ್‌ಮಸ್ ಸಂದರ್ಭದಲ್ಲಿ ಕುಟುಂಬಗಳ ಜತೆಗೆ ನೆಮ್ಮದಿಯಾಗಿರಲು ಜನ ಬಯಸಿರುತ್ತಾರೆ. ಈ ವೇಳೆಯಲ್ಲಿ ದಾಳಿ ನಡೆಸುವ ಮೂಲಕ ರಷ್ಯಾ ತನ್ನ ಉದ್ದೇಶ ಏನು, ಆದ್ಯತೆ ಏನು ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.