ಉಕ್ರೇನ್ ರಾಜಧಾನಿ ಕೀವ್ ಪ್ರಾಂತ್ಯದ ಮೇಲೆ ರಷ್ಯಾ ಎಸಗಿದ ಡ್ರೋನ್ ದಾಳಿಯಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿರುವ ಕಾರುಗಳು
ಕೀವ್: ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆ ನಡೆದಿರುವ ಬೆನ್ನಲ್ಲೇ, ಉಕ್ರೇನ್‌ನ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿ ರಷ್ಯಾ 273 ಕ್ಷಿಪಣಿಗಳನ್ನು ಉಡಾಯಿಸಿದೆ.
ಈ ಘಟನೆಯಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, ನಾಲ್ಕು ವರ್ಷದ ಮಗು ಸೇರಿದಂತೆ ಕನಿಷ್ಠ ಮೂವರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಕದನ ವಿರಾಮದ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಸೋಮವಾರ ಮಾತುಕತೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದರ ಬೆನ್ನಲ್ಲೇ, ರಷ್ಯಾ ಡ್ರೋನ್ ದಾಳಿ ನಡೆಸಿದೆ.
ಉಕ್ರೇನ್ ರಾಜಧಾನಿ ಕೀವ್ ಪ್ರಾಂತ್ಯ, ನಿಪ್ರೋಪೆಟ್ರೋವಸ್ಕ್ ಮತ್ತು ದೇಶದ ಪೂರ್ವಭಾಗದಲ್ಲಿರುವ ಡೊನೆಟ್‌ಸ್ಕ್ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ರಷ್ಯಾ 273 ಡ್ರೋನ್‌ಗಳನ್ನು ಉಡಾಯಿಸಿದೆ ಎಂದು ಉಕ್ರೇನ್ ವಾಯುಪಡೆ ತಿಳಿಸಿದೆ.
ಉಕ್ರೇನ್ ಮೇಲೆ ಯುದ್ಧ ಆರಂಭವಾದಾಗಿನಿಂದಲೂ ಈವರೆಗೆ ರಷ್ಯಾ ನಡೆಸಿದ ಅತಿದೊಡ್ಡ ಡ್ರೋನ್ ದಾಳಿ ಇದಾಗಿದೆ ಎಂದು ವಾಯುಪಡೆ ತಿಳಿಸಿದೆ.
ಶುಕ್ರವಾರ ಮೊದಲ ಬಾರಿಗೆ ಇಸ್ತಾನ್‌ಬುಲ್‌ನಲ್ಲಿ ರಷ್ಯಾ ಮತ್ತು ಉಕ್ರೇನ್ ಮಧ್ಯೆ ನೇರ ಮಾತುಕತೆ ನಡೆದಿತ್ತು. 90 ನಿಮಿಷಗಳ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳು ಪರಸ್ಪರ 1,000 ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದಕ್ಕೆ ಬಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.