ಮಾಸ್ಕೊ: ರಷ್ಯಾ ಸೇನೆ ಸೋಮವಾರ ನಡೆಸಿದ ಹೊಸ ಜಿರ್ಕಾನ್ ಹೈಪರ್ಸಾನಿಕ್ ಕ್ರೂಸ್ ಕ್ಷಿಪಣಿಯ ಮತ್ತೊಂದು ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.
ರಷ್ಯಾದ ಉತ್ತರದ ಶ್ವೇತ ಸಾಗರದಲ್ಲಿ ನೆಲೆಗೊಂಡಿರುವ ಅಡ್ಮಿರಲ್ ಗ್ರೋಷ್ಕೋವ್ ಯುದ್ಧ ನೌಕೆಯಿಂದ ಈ ಕ್ಷಿಪಣಿಯನ್ನು ಉಡಾಯಿಸಲಾಗಿದೆ. 350 ಕಿ.ಮೀ. ದೂರದಲ್ಲಿ ನಿಗದಿಪಡಿಸಿದ್ದ ಗುರಿಯನ್ನು ಈ ಕ್ಷಿಪಣಿ ಯಶಸ್ವಿಯಾಗಿ ಬೇಧಿಸಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಜಿರ್ಕಾನ್ ಕ್ಷಿಪಣಿ ಶಬ್ದದ ಒಂಬತ್ತು ಪಟ್ಟು ವೇಗದಲ್ಲಿ ಹಾರಬಲ್ಲದು ಮತ್ತು 1,000 ಕಿಲೋಮೀಟರ್ (620 ಮೈಲಿ) ದೂರವನ್ನು ಇದು ಕ್ರಮಿಸಬಲ್ಲದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಈ ಮೊದಲು ಈ ಪರೀಕ್ಷಾರ್ಥ ಪ್ರಯೋಗವನ್ನು ಅಕ್ಟೋಬರ್‌ನಲ್ಲಿ ಪುಟಿನ್ ಅವರ ಜನ್ಮದಿನದಂದು ನಡೆಸಲಾಗಿತ್ತು. ದೇಶಕ್ಕೆ ‘ಇದೊಂದು ಬಹುದೊಡ್ಡ ಮೈಲುಗಲ್ಲು’ ಎಂದು ಅವರು ಹೇಳಿದ್ದಾರೆ.
‘ಸೇನೆ ಮತ್ತು ನೌಕಾಪಡೆಯನ್ನು ಅತ್ಯಾಧುನಿಕ ಮತ್ತು ಸರಿಸಾಟಿಯಿಲ್ಲದ ಶಸ್ತ್ರಾಸ್ತ್ರ ವ್ಯವಸ್ಥೆಗಳೊಂದಿಗೆ ಸಜ್ಜುಗೊಳಿಸುತ್ತಿರುವುದು ನಮ್ಮ ದೇಶದ ರಕ್ಷಣಾ ಸಾಮರ್ಥ್ಯವನ್ನು ದೀರ್ಘಾವಧಿಗೆ ನಿಜವಾಗಿಯೂ ಬಲಿಷ್ಠಗೊಳಿಸಿದೆ’ ಎಂದು ಪುಟಿನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.