ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಕೀವ್: ರಷ್ಯಾ ಮತ್ತು ಉಕ್ರೇನ್ ಕದನ ವಿರಾಮ ಒಪ್ಪಂದಕ್ಕೆ ಬಂದ ನಂತರವಷ್ಟೇ ವ್ಲಾದಿಮಿರ್ ಪುಟಿನ್ ಮತ್ತು ವೊಲೊಡಿಮಿರ್ ಝೆಲೆನ್‌ಸ್ಕಿ ನಡುವೆ ಭೇಟಿ ಸಾಧ್ಯ ಎಂದು ಪುಟಿನ್ ಆಡಳಿತ ಕಚೇರಿ ಕ್ರೆಮ್ಲಿನ್ ಶನಿವಾರ ಹೇಳಿದೆ.
ಉಭಯ ದೇಶಗಳ ಸಂಧಾನಕಾರರ ನಡುವೆ ಬೆಳಿಗ್ಗೆ ನಡೆದ ಮಾತುಕತೆಯೂ ಕದನ ವಿರಾಮ ಒಪ್ಪಂದಕ್ಕೆ ಬರುವಲ್ಲಿ ಸಫಲತೆ ಕಾಣಲಿಲ್ಲ. ಮೂರು ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಟರ್ಕಿಯ ಮಧ್ಯಸ್ಥಿಕೆಯಲ್ಲಿ ಇಸ್ತಾಂಬುಲ್‌ನಲ್ಲಿ ಶುಕ್ರವಾರ ಮೊದಲ ಬಾರಿಗೆ ಆರಂಭವಾದ ಮಾತುಕತೆ ಸುಮಾರು 90 ನಿಮಿಷ ನಡೆದಿತ್ತು. ಮೊದಲ ದಿನದ ಮಾತುಕತೆಯಲ್ಲಿ ಉಭಯ ರಾಷ್ಟ್ರಗಳು ತಲಾ ಸಾವಿರ ಯುದ್ಧ ಕೈದಿಗಳನ್ನು ವಿನಿಮಯ ಮಾಡಿಕೊಳ್ಳುವ ಒಪ್ಪಂದ ಮಾಡಿಕೊಂಡಿವೆ.
‘ಮಾತುಕತೆಯ ಮುಂದಿನ ಹಂತವು ಝೆಲೆನ್‌ಸ್ಕಿ ಮತ್ತು ಪುಟಿನ್ ನಡುವಿನ ಸಭೆಯಾಗಿರುತ್ತದೆ ಎಂದು ಉಕ್ರೇನ್‌ನ ಮುಖ್ಯ ಸಂಧಾನಕಾರ, ರಕ್ಷಣಾ ಸಚಿವ ರುಸ್ತೆಮ್ ಉಮರೋವ್ ಹೇಳಿರುವುದನ್ನು ಗಮನಿಸಿದ್ದೇವೆ. ನಾವು ಇದನ್ನು ಸಾಧ್ಯವೆಂದು ಪರಿಗಣಿಸುತ್ತೇವೆ. ಆದರೆ, ಅದು ಉಭಯತ್ರರ ನಡುವೆ ವಿಷಯಗಳಲ್ಲಿ ಒಪ್ಪಂದ ಏರ್ಪಟ್ಟ ಬಳಿಕವೇ ಸಾಧ್ಯ’ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಶನಿವಾರ ಟರ್ಕಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮೊದಲು ಯುದ್ಧ ಕೈದಿಗಳ ವಿನಿಮಯವನ್ನು ಪೂರ್ಣಗೊಳಿಸಬೇಕು. ಮುಂದಿನ ಸುತ್ತಿನ ಮಾತುಕತೆಯನ್ನು ನಿಗದಿಪಡಿಸುವ ಮೊದಲು ಎರಡೂ ಕಡೆಯವರು ಕದನ ವಿರಾಮದ ಕುರಿತು ತಮ್ಮ ನಿಲುವು ಸ್ಪಷ್ಟಪಡಿಸಬೇಕಿದೆ. ಸದ್ಯಕ್ಕೆ, ನಿಯೋಗಗಳು ಶುಕ್ರವಾರ ಒಪ್ಪಿಕೊಂಡಿರುವುದನ್ನು ನಾವು ಅನುಷ್ಠಾನಕ್ಕೆ ತರಬೇಕಿದೆ. ತಲಾ ಒಂದು ಸಾವಿರ ಯುದ್ಧ ಕೈದಿಗಳ ವಿನಿಮಯ ಪೂರ್ಣಗೊಳಿಸುವುದು ಆದ್ಯತೆಯಾಗಿದೆ’ ಎಂದು ಹೇಳಿದರು.
‘ಶುಕ್ರವಾರ ನಡೆದ ಮಾತುಕತೆ ಕದನ ವಿರಾಮ ಒಪ್ಪಂದಕ್ಕೆ ಬರುವ ಅವಕಾಶವಿತ್ತು. ಆದರೆ, ರಷ್ಯಾ ನಮ್ಮ ನೆಲದಲ್ಲಿ ಹತ್ಯೆಗಳನ್ನು ಮುಂದುವರಿಸುವ ಅವಕಾಶವನ್ನು ಮಾತ್ರ ಉಳಿಸಿಕೊಂಡಿದೆ’ ಎಂದು ಝೆಲೆನ್‌ಸ್ಕಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.
‘ರಷ್ಯಾ ಮೇಲೆ ಬಲವಾದ ಒತ್ತಡ ಹೇರದೆ, ಕಠಿಣ ನಿರ್ಬಂಧಗಳನ್ನು ವಿಧಿಸದೆ ನಿಜವಾದ ಕದನ ವಿರಾಮ ಸಾಧ್ಯವಿಲ್ಲ. ಹಾಗಾಗಿ, ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧಗಳನ್ನು ಹೆಚ್ಚಿಸಬೇಕು’ ಎಂದು ಝೆಲೆನ್‌ಸ್ಕಿ ತಮ್ಮ ಮಿತ್ರರಾಷ್ಟ್ರಗಳಿಗೆ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.