ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ
ಇಸ್ತಾಂಬುಲ್ (ಟರ್ಕಿ): ರಷ್ಯಾ ಸೇನೆ ಹಕ್ಕು ಸಾಧಿಸಿರುವ ಎಲ್ಲ ಪ್ರದೇಶಗಳಿಂದ ಉಕ್ರೇನ್ ಪಡೆಗಳು ಸಂಪೂರ್ಣ ವಾಪಸ್ ಆಗಬೇಕು.
ರಷ್ಯಾ–ಉಕ್ರೇನ್ ಸಂಘರ್ಷ ಸಂಬಂಧ ಟರ್ಕಿಯ ಇಸ್ತಾಂಬುಲ್‌ನಲ್ಲಿ ಶುಕ್ರವಾರ ನಡೆದ ಶಾಂತಿ ಸಭೆಯಲ್ಲಿ ಕದನ ವಿರಾಮಕ್ಕೆ ಒಪ್ಪುವ ಮುನ್ನ ರಷ್ಯಾ ನಿಯೋಗ ಈ ರೀತಿಯ ಬೇಡಿಕೆ ಇಟ್ಟಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬೇಡಿಕೆಯು, ಮಾಸ್ಕೊ ಜೊತೆಗಿನ ಸಮಾಲೋಚನೆ ಬಳಿಕ ಅಮೆರಿಕ ಕಳೆದ ತಿಂಗಳು ಸಿದ್ಧಪಡಿಸಿದ್ದ ಶಾಂತಿ ಒಪ್ಪಂದದ ಕರಡಿನಲ್ಲಿನ ನಿಯಮಗಳನ್ನ ಮೀರಿದ್ದಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಮೂರು ವರ್ಷಗಳ ಹಿಂದೆ ಸಂಘರ್ಷ ಆರಂಭವಾದ ನಂತರ ಉಭಯ ರಾಷ್ಟ್ರಗಳ ನಡುವೆ ನಡೆದ ಮೊದಲ ನೇರ ಮಾತುಕತೆ ಇದಾಗಿದೆ. ಈ ವೇಳೆ, ಕೈದಿಗಳ ಹಸ್ತಾಂತರ ಒಪ್ಪಂದಕ್ಕೆ ಬರಲಾಗಿದೆಯಾದರೂ, ಕದನ ವಿರಾಮ ಘೋಷಣೆ ಸಾಧ್ಯವಾಗಿಲ್ಲ.
ಕಾರ್ಯಸಾಧ್ಯವಾಗದ ಷರತ್ತುಗಳನ್ನು ರಷ್ಯಾ ವಿಧಿಸಿತ್ತು ಎಂದು ಉಕ್ರೇನ್ ಮೂಲಗಳು ತಿಳಿಸಿವೆ.
ಉಕ್ರೇನ್‌ನ ಡೊನೆಟ್ಸ್ಕ್, ಜಪೊರಿಝಝಿನ್, ಖೆರ್ಸಾನ್ ಹಾಗೂ ಲುಹಾನ್‌ಸ್ಕ್ ಪ್ರದೇಶಗಳಿಂದ ಸೇನೆಯನ್ನು ಹಿಂಪಡೆದರಷ್ಟೇ ಕದನ ವಿರಾಮ ಮಾತುಕತೆ ಸಾಧ್ಯ ಎಂಬ ಷರತ್ತನ್ನು ರಷ್ಯಾ ವಿಧಿಸಿದೆ. ಈ ಪ್ರದೇಶಗಳು ರಷ್ಯಾ ಸೇನೆಯ ನಿಯಂತ್ರಣದಲ್ಲಿದ್ದರೂ, ಉಕ್ರೇನ್ ಪಡೆಗಳು ಹೋರಾಟ ಮುಂದುವರಿಸಿವೆ. ಈ ರೀತಿಯ ಯಾವುದೇ ಬೇಡಿಕೆ ಅಮೆರಿಕ ಸಿದ್ಧಪಡಿಸಿರುವ ಶಾಂತಿ ಒಪ್ಪಂದದ ಕರಡಿನಲ್ಲಿ ಇಲ್ಲ. ಇದಷ್ಟೇ ಅಲ್ಲದೆ, ಮತ್ತಷ್ಟು ಷರತ್ತುಗಳನ್ನು ವಿಧಿಸಲಾಗಿದೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.
ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಅವರನ್ನು ಉಕ್ರೇನ್ ಉಲ್ಲೇಖಿಸಿರುವ ಷರತ್ತುಗಳ ಬಗ್ಗೆ ಶನಿವಾರ ಮಾಧ್ಯಮದವರು ಪ್ರಶ್ನಿಸಿದ್ದರು. ಆದರೆ, ಪ್ರತಿಕ್ರಿಯಿಸಲು ನಿರಾಕರಿಸಿದ ಡಿಮಿಟ್ರಿ, ಆ ಚರ್ಚೆಗಳು ಗೋಪ್ಯವಾಗಿರಬೇಕು ಎಂದಷ್ಟೇ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.