ADVERTISEMENT

ಕೀವ್‌ ಮೇಲೆ ರಷ್ಯಾ ದಾಳಿ: 6 ಮಂದಿ ಸಾವು

ಗರ್ಭಿಣಿ ಸೇರಿದಂತೆ 35 ಮಂದಿಗೆ ಗಾಯ; 430 ಡ್ರೋನ್‌, 18 ಕ್ಷಿಪಣಿ ಬಳಕೆ

ಏಜೆನ್ಸೀಸ್
Published 15 ನವೆಂಬರ್ 2025, 14:51 IST
Last Updated 15 ನವೆಂಬರ್ 2025, 14:51 IST
ರಷ್ಯಾ ನಡೆಸಿದ ವೈಮಾನಿಕ ದಾಳಿಯಿಂದಾಗಿ ಉಕ್ರೇನ್‌ನ ಕೀವ್‌ ನಗರದ ವಸತಿ ಕಟ್ಟಡಕ್ಕೆ ಹಾನಿಯಾಗಿದೆ –ಎಎಫ್‌ಪಿ ಚಿತ್ರ
ರಷ್ಯಾ ನಡೆಸಿದ ವೈಮಾನಿಕ ದಾಳಿಯಿಂದಾಗಿ ಉಕ್ರೇನ್‌ನ ಕೀವ್‌ ನಗರದ ವಸತಿ ಕಟ್ಟಡಕ್ಕೆ ಹಾನಿಯಾಗಿದೆ –ಎಎಫ್‌ಪಿ ಚಿತ್ರ   

ಕೀವ್: ಉಕ್ರೇನ್‌ನ ಕೀವ್‌ ಮೇಲೆ ರಷ್ಯಾ ನಡೆಸಿದ ಕ್ಷಿಪಣಿ ಮತ್ತು ಡ್ರೋನ್‌ ದಾಳಿಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಗರ್ಭಿಣಿ ಸೇರಿದಂತೆ 35 ಮಂದಿ ಗಾಯಗೊಂಡಿದ್ದಾರೆ.

‘ರಷ್ಯಾ ಕನಿಷ್ಠ 430 ಡ್ರೋನ್‌ಗಳು ಮತ್ತು 18 ಕ್ಷಿಪಣಿಗಳನ್ನು ಬಳಸಿದೆ’ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

‘ದಕ್ಷಿಣದಲ್ಲಿ ಒಡೆಸಾ ಮತ್ತು ಈಶಾನ್ಯದಲ್ಲಿ ಹಾರ್ಕಿವ್‌ ಗುರಿಯಾಗಿಸಿ ದಾಳಿ ನಡೆಸಿದ್ದು, ಹೆಚ್ಚಾಗಿ ಕೀವ್‌ ನಗರವನ್ನು ಗುರಿಯಾಗಿರಿಸಿಕೊಂಡಿತ್ತು. ಅಲ್ಲಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳು ಎತ್ತರದ ವಸತಿ ಕಟ್ಟಡಗಳಿಗೆ ಡಿಕ್ಕಿ ಹೊಡೆದಿವೆ. ನಾಗರಿಕರಿಗೆ ಸಾಧ್ಯವಾದಷ್ಟು ಹಾನಿ ಉಂಟು ಮಾಡಲೆಂದೇ ವಿಶೇಷವಾಗಿ ಯೋಜಿಸಿದ ದಾಳಿಯಿದು’ ಎಂದು ಅವರು ಟೆಲಿಗ್ರಾಮ್‌ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ADVERTISEMENT

‘ಈ ದಾಳಿಯನ್ನು ಹಿಮ್ಮೆಟ್ಟಿಸಲು ಅಮೆರಿಕ ನಿರ್ಮಿತ ಪೇಟ್ರಿಯಾಟ್‌ ವಾಯು ರಕ್ಷಣಾ ವ್ಯವಸ್ಥೆಗಳನ್ನು ಉಕ್ರೇನ್‌ ಬಳಸಿದೆ. 14 ಕ್ಷಿಪಣಿಗಳನ್ನು ಹೊಡೆದುರುಳಿಸಿದೆ’ ಎಂದು ಹೇಳಿದ್ದಾರೆ.

‘ಉಕ್ರೇನ್‌ ಬೆಂಬಲಿಸುವ ರಾಷ್ಟ್ರಗಳು ಹೆಚ್ಚಿನ ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳನ್ನು ಕಳುಹಿಸಬೇಕು’ ಎಂದು ಝೆಲೆನ್‌ಸ್ಕಿ ಮನವಿ ಮಾಡಿದ್ದಾರೆ.

 ‘ಬೆಂಬಲ ಮುಂದುವರಿಕೆ’: ಶುಕ್ರವಾರ ಬರ್ಲಿನ್‌ನಲ್ಲಿ ಸಭೆ ನಡೆಸಿದ ಯುರೋಪಿನ ರಕ್ಷಣಾ ಅಧಿಕಾರಿಗಳು ಉಕ್ರೇನ್‌ಗೆ ತಮ್ಮ ಬೆಂಬಲವನ್ನು ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದರು. ಉಕ್ರೇನ್‌ ರಕ್ಷಣಾ ಸಚಿವ ಡೆನಿಸ್ ಶ್ಮಿಹಾಲ್‌ ಅವರು ವರ್ಚುವಲ್‌ ಆಗಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.