ಮಾಸ್ಕೊ:ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ(44) ಅವರು ಕೋಮಾ ಸ್ಥಿತಿ ತಲುಪಿದ್ದು,ವಿಷಪೂರಿತ ಪದಾರ್ಥ ಸೇವನೆಯ ಶಂಕೆ ವ್ಯಕ್ತವಾಗಿದೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಇದಕ್ಕಿದ್ದಂತೆ ಅವರ ಆರೋಗ್ಯ ಹದಗೆಟ್ಟಿದೆ, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಸೈಬೀರಿಯಾದ ಟಾಮ್ಸ್ಕ್‌ನಿಂದ ಮಾಸ್ಕೋಗೆ ವಿಮಾನದಲ್ಲಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಅಲೆಕ್ಸಿ ಅವರ ಆರೋಗ್ಯ ಹದಗೆಟ್ಟಿತು. ತಕ್ಷಣವೇ ಒಮಾಸ್ಕ್ ಎಂಬಲ್ಲಿ ವಿಮಾನವನ್ನು ತುರ್ತಾಗಿ ಇಳಿಸಲಾಯಿತು’ ಎಂದು ಅವರ ವಕ್ತಾರೆ ಕಿರಾ ಯರ್ಮಿಶ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ಅವರನ್ನು ತೀವ್ರ ನಿಗಾಘಟಕದಲ್ಲಿ ಇರಿಸಿ,ವೆಂಟಿಲೇಟರ್ ನೆರವಿನೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
‘ಅವರು ಬೆಳಿಗ್ಗೆ ವಿಮಾನ ನಿಲ್ದಾಣದ ಕೆಫೆಯಲ್ಲಿ ಚಹಾ ಕುಡಿದರು. ಅದರ ಹೊರತು ಅವರು ಬೇರೆ ಏನು ಸೇವಿಸಿರಲಿಲ್ಲ. ಚಹಾದಲ್ಲಿ ತಕ್ಷಣವೇ ಕರಗಬಲ್ಲಂಥ ಪದಾರ್ಥವನ್ನು ಸೇರಿಸಿರಬಹುದು. ಇದೇ ಅವರ ಆರೋಗ್ಯ ಏರುಪೇರಾಗಲು ಕಾರಣ ಎಂಬುದಾಗಿ ವೈದ್ಯರು ಶಂಕಿಸಿದ್ದಾರೆ’ ಎಂದೂ ಯರ್ಮಿಶ್ ಮಾಹಿತಿ ನೀಡಿದ್ದಾರೆ.
ಅಲೆಕ್ಸಿ ನವಲ್ನಿ ಆರೋಗ್ಯ ಸ್ಥಿರವಾಗಿದೆ. ಆದರೂ, ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಕಳೆದ ವರ್ಷವೂ ನವಲ್ನಿ ಅವರು ತೀವ್ರ ಅಲರ್ಜಿಯಿಂದ ಬಳಲಿದ್ದರು. ವಿಷ ಪ್ರಯೋಗದಿಂದ ಈ ರೀತಿ ಆಗಿರುವ ಸಂಭವವಿದೆ ಎಂದು ವೈದ್ಯರು ತಿಳಿಸಿದ್ದರು ಎಂದು ಅವರು ಹೇಳಿದ್ದಾರೆ.
ವಕೀಲ ಮತ್ತು ಭ್ರಷ್ಟಾಚಾರ ವಿರೋಧಿ ಆಂದೋಲನದ ಚಳವಳಿಗಾರ ನವಲ್ನಿಸರ್ಕಾರದ ವಿರುದ್ಧ ಧ್ವನಿಎತ್ತಿ ಹಲವು ಬಾರಿ ಜೈಲುವಾಸ ಅನುಭಸಿದ್ದಾರೆ. ಸರ್ಕಾರದ ಪರ ಕಾರ್ಯಕರ್ತರಿಂದ ಥಳಿತ್ತಕ್ಕೂ ಒಳಗಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.