ADVERTISEMENT

ಗೊರ್ಬಚೆವ್‌ಗೆ ಅಂತಿಮ ವಿದಾಯ, ಪುಟಿನ್ ಗೈರು

ಏಜೆನ್ಸೀಸ್
Published 3 ಸೆಪ್ಟೆಂಬರ್ 2022, 14:38 IST
Last Updated 3 ಸೆಪ್ಟೆಂಬರ್ 2022, 14:38 IST
ಮಿಖಾಯಿಲ್ ಗೊರ್ಬಚೇವ್ ಅವರ ಮಗಳು ಐರಿನಾ ವಿರ್ಗಾನ್ಸ್ಕಾಯಾ ಅವರು ಶವಪೆಟ್ಟಿಗೆ ಬಳಿ ದುಖಃತಪ್ತರಾಗಿದ್ದರು.  –ಚಿತ್ರ ಎಎಫ್‌ಪಿ
ಮಿಖಾಯಿಲ್ ಗೊರ್ಬಚೇವ್ ಅವರ ಮಗಳು ಐರಿನಾ ವಿರ್ಗಾನ್ಸ್ಕಾಯಾ ಅವರು ಶವಪೆಟ್ಟಿಗೆ ಬಳಿ ದುಖಃತಪ್ತರಾಗಿದ್ದರು.  –ಚಿತ್ರ ಎಎಫ್‌ಪಿ   

ಮಾಸ್ಕೊ: ಆಗಸ್ಟ್‌ 30ರಂದು ನಿಧನ ಹೊಂದಿದ ರಷ್ಯಾ ಸಂಯುಕ್ತ ಸಂಸ್ಥಾನದ ಕೊನೆಯ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್‌ ಅವರಿಗೆ ಶನಿವಾರ ರಷ್ಯಾದ ಜನರು ಭಾವಪೂರ್ಣ ವಿದಾಯ ಹೇಳಿದರು. ಆದರೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೈರು ಹಾಜರಾಗಿದ್ದರು.

ಇಲ್ಲಿನ ಐತಿಹಾಸಿಕ ಹಾಲ್ ಆಫ್ ಕಾಲಮ್ಸ್‌ನಲ್ಲಿ ತೆರೆದ ಪೆಟ್ಟಿಗೆಯಲ್ಲಿ ಇರಿಸಿದ್ದ ಪಾರ್ಥಿವ ಶರೀರಕ್ಕೆ ಸಾವಿರಾರು ಜನರು ಸರತಿ ಸಾಲಿನಲ್ಲಿ ನಿಂತು ಗೌರವ ಸಲ್ಲಿಸಿದರು.ರಷ್ಯಾ ಧ್ವಜ ಹಿಡಿದಿದ್ದ ಸಿಬ್ಬಂದಿ ಗೌರವ ರಕ್ಷೆ ನೀಡಿದರು.

ಮಾಸ್ಕೊದ ಪ್ರತಿಷ್ಠಿತ ನೊವೊಡೆವಿಚಿ ಸ್ಮಶಾನದಲ್ಲಿ ಪತ್ನಿ ರೈಸಾ ಪಕ್ಕದಲ್ಲಿಯೇ ಅವರ ಸಮಾಧಿ ಮಾಡಲಾಯಿತು.

ADVERTISEMENT

ಪುಟಿನ್ ಅವರು ಆಸ್ಪತ್ರೆಯಲ್ಲಿ ಗೊರ್ಬಚೇವ್ ಅವರ ಮೃತದೇಹಕ್ಕೆ ಕೆಂಪು ಗುಲಾಬಿಗಳ ಪುಷ್ಪಗುಚ್ಛವನ್ನು ಇಡುತ್ತಿರುವ ಚಿತ್ರಗಳನ್ನು ಸರ್ಕಾರಿ ಸ್ವಾಮ್ಯದ ಮಾಧ್ಯಮ ತೋರಿಸಿದೆ.

‘ಪೂರ್ವ ನಿಗದಿತ ಕಾರ್ಯಕ್ರಮಗಳಿಂದಾಗಿ ಶನಿವಾರದ ಅಂತ್ಯಕ್ರಿಯೆಯಲ್ಲಿಪುಟಿನ್ ಭಾಗವಹಿಸುವುದಿಲ್ಲ’ ಎಂದು ಕೆಮ್ಲಿನ್ ಹೇಳಿದೆ.

ರಷ್ಯಾದಲ್ಲಿ ಉನ್ನತ ಅಧಿಕಾರಿಗಳ ಅಂತ್ಯಕ್ರಿಯೆಗಾಗಿಈ ಸಭಾಂಗಣವನ್ನು ದೀರ್ಘಕಾಲ ಬಳಸಲಾಗಿದೆ. 1953ರಲ್ಲಿ ಮರಣ ಹೊಂದಿದ ಜೋಸೆಫ್‌ ಸ್ಟಾಲಿನ್ ಅವರ ದೇಹವನ್ನು ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆಯ ಸಮಯದಲ್ಲಿ ಇಡಲಾಗಿತ್ತು.

‘ಇದು ಸ್ವಾತಂತ್ರ್ಯದ ಉಸಿರು, ಇದು ದೀರ್ಘಕಾಲದವರೆಗೆ ಕೊರತೆಯಾಗಿತ್ತು’ ಎಂದು 41 ವರ್ಷದ ಅನುವಾದಕಿ ಕೆಸೆನಿಯಾ ಝೂಪನೊವಾ ಅವರು ಹೇಳಿದರು.

ದೀರ್ಘಕಾಲದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 91 ವರ್ಷದ ಗೊರ್ಬಚೆವ್‌ ಮಂಗಳವಾರ ನಿಧನರಾದರು. 1985 ರಿಂದ 1991ರ ಅಂತ್ಯದವರೆಗೂ ಅವರು ರಷ್ಯಾ ಸೋವಿಯತ್ ಒಕ್ಕೂಟದ ಅಧ್ಯಕ್ಷರಾಗಿದ್ದರು.ಹಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಂಡಿದ್ದರು.ಸೋವಿಯತ್ ಒಕ್ಕೂಟವನ್ನು ಪ್ರಜಾಪ್ರಭುತ್ವ ಸುಧಾರಣೆಗಳೊಂದಿಗೆ ಪರಿವರ್ತಿಸಲು ಪ್ರಯತ್ನಿಸಿದರು.

ಶೀತಲ ಸಮರಕ್ಕೆ ಅಂತ್ಯ ಹಾಡಿ ಜಾಗತಿಕವಾಗಿ ಮನ್ನಣೆಗೆ ಪಾತ್ರರಾದ ಅವರಿಗೆ 1990ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಸಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.