ADVERTISEMENT

ರವಾಂಡಾ: ವಿರೋಧ ಪಕ್ಷದ ನಾಯಕಿ ಜೈಲಿನಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2018, 13:43 IST
Last Updated 15 ಸೆಪ್ಟೆಂಬರ್ 2018, 13:43 IST
ವಿಕ್ಟೋಯರ್‌ ಇಂಗಬೈರ್‌
ವಿಕ್ಟೋಯರ್‌ ಇಂಗಬೈರ್‌   

ಕಿಗಾಲಿ,ರವಾಂಡಾ(ಎಪಿ): ಇಲ್ಲಿನ ವಿರೋಧ ಪಕ್ಷದ ನಾಯಕಿ ವಿಕ್ಟೋಯರ್‌ ಇಂಗಬೈರ್‌ ಅವರನ್ನು ಸರ್ಕಾರ ಶನಿವಾರ ಅನಿರೀಕ್ಷಿತವಾಗಿ ಸೆರೆಮನೆಯಿಂದ ಬಿಡುಗಡೆಗೊಳಿಸಿದೆ.

ವಿಕ್ಟೋಯರ್‌ ಜೊತೆ 2,000ಕ್ಕೂ ಅಧಿಕ ಕೈದಿಗಳನ್ನು ಜೈಲುಶಿಕ್ಷೆ ಪೂರ್ಣಗೊಳ್ಳುವ ಮೊದಲೇ ಬಿಡುಗಡೆ ಮಾಡುವಂತೆ ಅಧ್ಯಕ್ಷ ಪೌಲ್‌ ಕಗಾಮೆ ಆದೇಶಿಸಿದ್ದರು.

‘ನನ್ನನ್ನು ಬಿಡುಗಡೆ ಮಾಡಲು ಆದೇಶ ನೀಡಿದ ಅಧ್ಯಕ್ಷರಿಗೆ ಧನ್ಯವಾದ’ ಎಂದು ಕಿಗಾಲಿಯ ಮ್ಯಾಗರೇಗರ್‌ ಜೈಲಿನಿಂದ ಬಿಡುಗಡೆಗೊಂಡ ಬಳಿಕ ವಿಕ್ಟೋಯರ್‌ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ರವಾಂಡಾದ ರಾಜಕೀಯದಲ್ಲಿ ಇದೊಂದು ಹೊಸ ಹೆಜ್ಜೆ. ಇತರ ರಾಜಕೀಯ ಕೈದಿಗಳ ಬಿಡುಗಡೆಗೂ ಅಧ್ಯಕ್ಷರು ಆದೇಶಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ವಿಕ್ಟೋಯರ್‌, ಸಂಗೀತಗಾರ ಕಿಝಿಟೊ ಮಿಹಿಗೊ ಸೇರಿದಂತೆ 2,140 ಕೈದಿಗಳನ್ನು ಬಿಡುಗಡೆಗೊಳಿಸಲು ಶುಕ್ರವಾರ ಅಧ್ಯಕ್ಷ ಪೌಲ್‌ ಕಗಾಮೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎಂದು ರವಾಂಡಾದ ಕಾನೂನು ಸಚಿವರು ತಿಳಿಸಿದ್ದಾರೆ.

ಭಯೋತ್ಪಾದನೆ ಚಟುವಟಿಕೆ ಮತ್ತು ದೇಶದ್ರೋಹದ ಆರೋಪದಲ್ಲಿ ವಿಕ್ಟೋಯರ್‌ ಅವರನ್ನು ಬಂಧಿಸಲಾಗಿತ್ತು. 2012ರಲ್ಲಿ ನ್ಯಾಯಾಲಯವು ಅವರಿಗೆ 10 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಅನಂತರ ರವಾಂಡಾ ಸುಪ್ರೀಂ ಕೋರ್ಟ್‌ ಜೈಲು ಶಿಕ್ಷೆಯನ್ನು 15 ವರ್ಷಗಳಿಗೆ ವಿಸ್ತರಿಸಿತ್ತು.

1994ರಲ್ಲಿ ಇಲ್ಲಿ ನಡೆದ ಟುಟ್ಸಿ ಜನಾಂಗದವರ ನರಮೇಧದ ಕುರಿತು ವಿಕ್ಟೋಯರ್‌ ಅವರು ಸರ್ಕಾರವನ್ನು ಬಹಿರಂಗವಾಗಿ ಟೀಕಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.